ಕ್ಷೇತ್ರ ಮರುವಿಂಗಡಣೆ ಮಸೂದೆ, ಬರ ಪರಿಹಾರ ವಿಳಂಬ, ಮಹಿಳಾ ಪ್ರಾತಿನಿಧ್ಯ, ಪ್ರತ್ಯೇಕ ರಾಜ್ಯದ ಕೂಗು ಹಾಗೂ ಆಶಾ ಕಾರ್ಯಕರ್ತರ ಪ್ರತಿಭಟನೆ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸರ್ಕಾರದ ನಿರ್ಧಾರಗಳು ಹಾಗೂ ಪಕ್ಷದ ನಿಲುವಿನ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಸುರಪುರ ತಾಲೂಕಿನ ಬಂಡೊಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಕೇಂದ್ರ ಸರ್ಕಾರ ಮಂಡಿಸುವ ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಯಾವುದೇ ರಾಜ್ಯಕ್ಕೆ ಅನ್ಯಾಯ ಅಥವಾ ನಷ್ಟವಾಗಬಾರದು ಎಂದು ಹೇಳಿದರು. ಹಿಂದಿ ಭಾಷಿತ ರಾಜ್ಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಿ ದಕ್ಷಿಣದ ರಾಜ್ಯಗಳ ಸೀಟುಗಳು ಕಡಿಮೆಯಾಗಬಾರದು, ಅನ್ಯಾಯವಾದರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಹಾಗೂ ಪಾರ್ಲಿಮೆಂಟ್ಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ ಎಂದು ಎಚ್ಚರಿಸಿದರು. ಜೊತೆಗೆ ಬರಗಾಲ ಅಧ್ಯಯನ ತಂಡ ಈಗಾಗಲೇ ಅಧ್ಯಯನ ನಡೆಸಿ ತೆರಳಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಅಧಿವೇಶನಕ್ಕೂ ಮುನ್ನ ಪರಿಹಾರ ಹಣ ಬಿಡುಗಡೆ ಮಾಡದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಯುವ ಸಾಧ್ಯತೆಯಿದೆ ಎಂದ ಅವರು, ಸಿಎಂ ಮತ್ತು ಸಂಪುಟದ ನಿರ್ಧಾರಕ್ಕೆ ಪಕ್ಷದ ಬೆಂಬಲವಿರುತ್ತದೆ ಎಂದು ತಿಳಿಸಿದರು.
ಸಚಿವ ಸಂಪುಟ ಪುನರರಚನೆ ಕುರಿತು ಮಾತನಾಡಿದ ಅವರು, ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ನೀಡಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಹಾಗೂ ಬೆಳಗಾವಿ ಅಥವಾ ಬಳ್ಳಾರಿಗೆ ಅವಕಾಶ ಸಿಗುವುದೇ ಎಂಬುದನ್ನು ಪಕ್ಷವೇ ನಿರ್ಧರಿಸಲಿದೆ ಎಂದರು. ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಪ್ರತಿಕ್ರಿಯಿಸಿ, ಹೇಳಿದ ತಕ್ಷಣ ಪ್ರತ್ಯೇಕ ರಾಜ್ಯವಾಗುವುದಿಲ್ಲ ಹಾಗೂ ಸದ್ಯಕ್ಕೆ ಅದರ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಹಾಗೂ 2,000 ರೂ. ಹೆಚ್ಚಳದ ಬೇಡಿಕೆಗೆ ಸಿಎಂ ಸ್ಪಂದಿಸಿದ್ದು, ತಕ್ಷಣ ಪರಿಹಾರ ನೀಡಲು ಸಾಧ್ಯವಾಗದಿದ್ದರೂ ಕಾಲಾವಕಾಶ ನಿಗದಿಯಾದ ಬಳಿಕ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
