ಡಿಸೆಂಬರ್ 2ರಿಂದ ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಸುವರ್ಣ ಸೌಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭದ್ರತೆಗೆ ಬರುವ ಪೊಲೀಸರಿಗೆ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಬೆಳಗಾವಿ ತಾಲೂಕಿನ ಹಲಗಾದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ. ಈಗಾಗಲೇ ಸುವರ್ಣ ವಿಧಾನಸೌಧವು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಅಧಿವೇಶನದ ಸ್ವಾಗತಕ್ಕೆ ಸಜ್ಜಾಗಿದೆ.

ಇನ್ನು ಅಧಿವೇಶನದ ಭದ್ರತೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗಾವಿಗೆ ಆಗಮಿಸಲಿದ್ದು, ಅವರ ವಸತಿಗಾಗಿ ಹಲಗಾದ ಭೀಮಸೇನ ಪಾವಲೆ ಮೈದಾನದ ಪಕ್ಕದ ಬಯಲಿನಲ್ಲಿ ನಾಲ್ಕು ಬೃಹತ್ ಪೆಂಡಾಲ್ಗಳನ್ನು ನಿರ್ಮಿಸಲಾಗಿದೆ. ಪೊಲೀಸರ ವಿಶ್ರಾಂತಿಗಾಗಿ ಬೆಡ್, ಹಾಸಿಗೆ, ಹೊದಿಕೆ ಮತ್ತು ದಿಂಬುಗಳ ವ್ಯವಸ್ಥೆ ಮಾಡಲಾಗಿದ್ದು, ಚಳಿಗಾಲದ ಹಿನ್ನೆಲೆಯಲ್ಲಿ ಬಿಸಿ ನೀರಿನ ಸ್ನಾನಕ್ಕಾಗಿ ದೊಡ್ಡ ಬಾಯ್ಲರ್ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಊಟ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನಳ ಜೋಡಣೆ ಕಾರ್ಯವೂ ಭರದಿಂದ ಸಾಗುತ್ತಿದೆ.

ಮತ್ತೊಂದೆಡೆ ಅಧಿವೇಶನದ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಗಳಿಂದ ಹಲವಾರು ಸಂಘಟನೆಗಳು ಮತ್ತು ಪ್ರತಿಭಟನಾಕಾರರು ಬೆಳಗಾವಿಗೆ ಆಗಮಿಸಲಿದ್ದಾರೆ. ಇವರ ಪ್ರತಿಭಟನೆಗೆ ಅನುಕೂಲವಾಗುವಂತೆ ಹಲಗಾ-ಮಚ್ಛೆ ಬೈಪಾಸ್ ಬಳಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡ್ಡಿಪಡಿಸದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಒಟ್ಟಾರೆಯಾಗಿ ಪೊಲೀಸರ ವಸತಿ, ಪ್ರತಿಭಟನಾ ಸ್ಥಳಗಳ ನಿರ್ಮಾಣ ಹಾಗೂ ಬಿಗಿ ಭದ್ರತಾ ವ್ಯವಸ್ಥೆಗಳು ಅಂತಿಮ ಹಂತ ತಲುಪಿದ್ದು, ಯಶಸ್ವಿ ಚಳಿಗಾಲದ ಅಧಿವೇಶನ ನಡೆಸಲು ಆಡಳಿತ ಯಂತ್ರ ಸಂಪೂರ್ಣವಾಗಿ ಸಜ್ಜಾಗಿದೆ.
