ಆರ್ಥಿಕ ಸಂಕಷ್ಟದಿಂದ ಶಿಕ್ಷಣ ವಂಚಿತರಾಗುತ್ತಿರುವ ಬಡ ವಿದ್ಯಾರ್ಥಿಗಳಿಗೆ ಬೆಳಗಾವಿಯ ಸಂಸ್ಥೆಯೊಂದು ಆಸರೆಯಾಗಿದೆ. ‘ಶಾಂತಾಯಿ ವಿದ್ಯಾ ಆಧಾರ್’ ಯೋಜನೆಯಡಿ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ.


ಬೆಳಗಾವಿಯ ಭರತೇಶ್ ಎಜುಕೇಶನ್ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿದ್ಯಾ ಆಧಾರ್ ಎಜುಕೇಶನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ 20 ಅರ್ಹ ಬಡ ವಿದ್ಯಾರ್ಥಿಗಳಿಗೆ ಒಟ್ಟು 2 ಲಕ್ಷ ರೂ. ಶೈಕ್ಷಣಿಕ ಆರ್ಥಿಕ ನೆರವಿನ ಚೆಕ್‌ಗಳನ್ನು ವಿತರಿಸಲಾಯಿತು. ‘ಶಾಂತಾಯಿ ವಿದ್ಯಾ ಆಧಾರ್’ ಉಪಕ್ರಮದಡಿ ಇದುವರೆಗೆ 485ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ಸಹಾಯ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಸಿಇಒ ಮಂಚಲ್ವಾರ್ ಸುಧಾಮ್, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಅತ್ಯುತ್ತಮ ಸಮಾಜ ಸೇವೆಯಾಗಿದೆ ಎಂದು ಶ್ಲಾಘಿಸಿದರು.

ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ವಿಜಯ್ ಮೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಈ ಸಂಸ್ಥೆಯಿಂದ ನೆರವು ಪಡೆದು ತಿಂಗಳಿಗೆ 1.5 ಲಕ್ಷ ರೂ. ವೇತನದ ಉದ್ಯೋಗ ಪಡೆದ ವಿದ್ಯಾರ್ಥಿನಿಯೊಬ್ಬರು ತಮ್ಮ ಮೊದಲ ಸಂಬಳದ ಸಂಪೂರ್ಣ 1.5 ಲಕ್ಷ ರೂ.ಗಳನ್ನು ಮತ್ತೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿಯೇ ದಾನ ಮಾಡಿರುವ ಸ್ಪೂರ್ತಿದಾಯಕ ಘಟನೆಯನ್ನು ಸ್ಮರಿಸಿದರು. ಸಮಾರಂಭದಲ್ಲಿ ಭರತೇಶ್ ಟ್ರಸ್ಟ್ ಅಧ್ಯಕ್ಷೆ ಡಾ. ಸಾವಿತ್ರಿ ದೊಡ್ಡಣ್ಣವರ, ಹೀರಾಚಂದ್ ಕಲ್ಮಣಿ, ಉದ್ಯಮಿ ಅವಿನಾಶ್ ಪೋತದಾರ್, ಸಮಾಜ ಸೇವಕ ನಿತಿನ್ ಖೋತ್ ಹಾಗೂ ವಿದ್ಯಾ ಆಧಾರ್ ಅಧ್ಯಕ್ಷ ವಿನಾಯಕ್ ಬೊಂಗಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

