Belagavi

ಬ್ಯಾಂಕ್ ಅಧಿಕಾರಿಗಳಿಂದಲೇ ಮಹಾ ವಂಚನೆ: ಉದ್ಯಮಿಯ ಖಾತೆಯಿಂದ 86.30 ಲಕ್ಷ ರೂ. ಗುಳುಂ!

Share

ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ 1.32 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ, 86.30 ಲಕ್ಷ ರೂ. ಹಣವನ್ನು ಮರಳಿಸದೆ ವಂಚಿಸಿರುವ ಆರೋಪ ಕೆನರಾ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾನಾಪುರ ತಾಲೂಕಿನ ರುಮೇವಾಡಿ ಕ್ರಾಸ್ ನಿವಾಸಿ ಹಾಗೂ ಶ್ರೀದತ್ತ ಕ್ಯಾಶೋ ಇಂಡಸ್ಟ್ರೀಸ್ ಮಾಲೀಕ ಸುರೇಶ ಲಕ್ಷ್ಮಣ ಶಿವನಗೇಕರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಉದ್ಯಮದ ಅಭಿವೃದ್ಧಿಗಾಗಿ 2024ರ ಫೆಬ್ರವರಿಯಲ್ಲಿ ತಿಳಕವಾಡಿ ಕೆನರಾ ಬ್ಯಾಂಕ್ ಶಾಖೆಯಿಂದ 2.86 ಕೋಟಿ ರೂ. ಓವರ್‌ಡ್ರಾಫ್ಟ್ ಮತ್ತು ಟರ್ಮ್ ಲೋನ್ ಪಡೆದಿದ್ದರು. ಈ ಅವಧಿಯಲ್ಲಿ ಅವರ ಖಾತೆಯಿಂದ ಮೂರು ಹಂತಗಳಲ್ಲಿ 1.32 ಕೋಟಿ ರೂ. ಹಣವನ್ನು ಅವರ ಅನುಮತಿಯಿಲ್ಲದೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ದೂರಿದ್ದಾರೆ‌.
ಹಣ ವರ್ಗಾವಣೆಯ ಬಗ್ಗೆ ಪ್ರಶ್ನಿಸಿದಾಗ ಬ್ಯಾಂಕ್ ಅಧಿಕಾರಿಗಳು ತಪ್ಪಾಗಿ ಹಣ ಬೇರೆ ಖಾತೆಗಳಿಗೆ ಹೋಗಿದ್ದು, ಮರಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 46 ಲಕ್ಷ ರೂ. ವಾಪಸ್ ನೀಡಿದ್ದು, ಉಳಿದ 86.30 ರೂ. ಲಕ್ಷವನ್ನು ಹಲವು ವರ್ಷಗಳಿಂದ ಮರಳಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು, ತಿಳಕವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:

error: Content is protected !!