ಬೆಳಗಾವಿಯಲ್ಲಿ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಸಂವಿಧಾನದ ಹಕ್ಕುಗಳು, ಸಮಾನತೆ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬೆಳಗಾವಿಯ ಸಿವಿಲ್ ಆಸ್ಪತ್ರೆ ಎದುರಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನದಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವ ಮಹಾಮಂಡಳ ಹಾಗೂ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ‘ಸಂವಿಧಾನ ಸಮರ್ಪಣಾ ದಿನ’ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ರಾಜು ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಇನ್ನುಳಿದ ಗಣ್ಯರು ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ನಂತರ ಸಂವಿಧಾನದ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸಿಫ್ ಸೇಠ್, ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನವು ಕೇವಲ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಲ್ಲ; ದೇಶದ ಪ್ರತಿಯೊಬ್ಬ ಪ್ರಜೆಗೂ ಸೇರಿದೆ ಎಂದರು. ಶಿಕ್ಷಣ, ಆರೋಗ್ಯ, ಧರ್ಮ, ಭಾಷೆ ಹಾಗೂ ಮೀಸಲಾತಿಯಂತಹ ಹಕ್ಕುಗಳಿಂದ ಜನರು ಪ್ರಗತಿ ಸಾಧಿಸಿದ್ದು, ಅಂಬೇಡ್ಕರ್ ಅವರನ್ನು ಕೇವಲ ಒಂದು ದಿನವಲ್ಲದೆ ಪ್ರತಿದಿನ ಸ್ಮರಿಸಿ ಕೃತಜ್ಞತೆ ಸಲ್ಲಿಸಬೇಕು ಮತ್ತು ಉತ್ತಮ ನಾಗರಿಕರಾಗಿ ಸಂವಿಧಾನದ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಮಹಾಮಂಡಳದ ಅಧ್ಯಕ್ಷ ಮತ್ತು ಕೆ.ಎಸ್.ಐ..ಐ.ಡಿ.ಸಿ ಯ ರಾಜ್ಯ ನಿರ್ದೇಶಕ ಮಲ್ಲೇಶ ಚೌಗುಲೆ, ಸಂವಿಧಾನದ ಆಶಯಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ ನಿಜ ಜೀವನದಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದರು.
ಈ ಸಮಾರಂಭದಲ್ಲಿ ಮಲ್ಲೇಶ ಚೌಗುಲೆ, ಸಂದೀಪ ಕೋಲಕರ, ಮಹಾದೇವ ತಳವಾರ, ದುರ್ಗೇಶ ಮೈತ್ರಿ, ಆನಂದ ಕಾಂಬಳೆ, ಸುಧೀರ ಚೌಗುಲೆ, ಗಣೇಶ ಶಂಗಣನವರ, ಸಿದ್ರಾರ್ಯ ಮೈತ್ರಿ, ರವಿ ಕೋಲಕರ, ಶೇಖರ ಕೋಲಕರ, ವಿಜಯ ಗೋಜಗೇಕರ, ಪ್ರಕಾಶ ಚಂಪನ್ನವರ, ವಿನೋದ ಸೋಲಾಪುರೆ ಮತ್ತು ಸಾಕ್ಷಿ ದರೆನ್ನವರ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ನಾಗರಿಕರು ಪಾಲ್ಗೊಂಡು ಸಂವಿಧಾನದ ರಕ್ಷಣೆ ಮತ್ತು ಸಾಮಾಜಿಕ ಸಮಾನತೆಯ ಸಂಕಲ್ಪ ಕೈಗೊಂಡರು.
