ಪತ್ರಕರ್ತರು ತಮ್ಮ ಲೇಖನಿಯ ಮೂಲಕ ಸಮಾಜದ ಸಮಸ್ಯೆ ಹಾಗೂ ವಾಸ್ತವವನ್ನು ಜನರ ಮುಂದಿಟ್ಟು ಉತ್ತಮ ಸಮಾಜ ನಿರ್ಮಿಸಲು ಶ್ರಮಿಸುತ್ತಾರೆ ಎಂದು ಖಾನಾಪುರ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಡಿ.ಇ. ನಾಡಗೌಡ ಹೇಳಿದರು.

ಖಾನಾಪುರ ತಾಲೂಕು ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ವನಮಾಲಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ. ಡಿ.ಇ. ನಾಡಗೌಡ ಮಾತನಾಡಿದರು. ಪತ್ರಕರ್ತರು ಮತ್ತು ವೈದ್ಯರು ಸಮಾಜದಲ್ಲಿ ವಿಶ್ವಾಸ ಹಾಗೂ ಸಹಕಾರದ ಬಾಂಧವ್ಯ ಬೆಸೆಯುವ ಮಹತ್ವದ ಕಾರ್ಯ ಮಾಡುತ್ತಾರೆ ಎಂದರು. ಕಾನೂನು ತಜ್ಞ ಅಡ್ವೋಕೇಟ್ ಐ.ಆರ್. ಘಾಡಿ ಮಾತನಾಡಿ, ಪತ್ರಕರ್ತರು ಮತ್ತು ವೈದ್ಯರು ಸಮಾಜಕ್ಕೆ ವರದಾನವಿದ್ದಂತೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ವಿವೇಕ್ ಗಿರಿ, ಪ್ರಸನ್ನ ಕುಲಕರ್ಣಿ, ಪಿರಾಜಿ ಕುರ್ಹಾುಡೆ, ವಾಸುದೇವ ಚೌಗುಲೆ, ಸಂದೀಪ ಸುತಾರ, ಅಪ್ಪಾಜಿ ಪಾಟೀಲ, ಸುಹಾಸ ಪಾಟೀಲ, ವಿಲಾಸ ಕವಠಣಕರ, ಹಣಮಂತ ಗುರವ ಸೇರಿದಂತೆ ಹಿರಿಯ ಸಲಹೆಗಾರ ಅಡ್ವೋಕೇಟ್ ಐ.ಆರ್. ಘಾಡಿ ಹಾಗೂ ಸಮಾಜ ಸೇವಕ ವಿನಾಯಕ ಮುತಗೇಕರ ಅವರನ್ನು ಸನ್ಮಾನಿಸಲಾಯಿತು. ಡಾ. ಶಂಕರ ಪಾಟೀಲ ಸ್ವಾಗತಿಸಿದರೆ, ಡಾ. ವೈಭವ ಪಾಟೀಲ ವಂದಿಸಿದರು.
