ಬೆಳಗಾವಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಇಬ್ಬರು ಯುವಕರ ವಿರುದ್ಧ ಮಾರ್ಕೆಟ್ ಠಾಣೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದವರನ್ನು ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ನವೆಂಬರ್ 25, 2026ರಂದು ಬೆಳಗಾವಿಯ ಛತ್ರಪತಿ ಶಿವಾಜೀ ನಗರದ 2ನೇ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ರಾಜೇಶ್ ಗಂಗಾರಾಮ ಇಂಗಳೆ (22) ಎಂಬಾತನನ್ನು ಮಾರ್ಕೆಟ್ ಠಾಣೆಯ ಪಿಎಸ್ಐ ಹುಸೇನಸಾಬ ಕೆರೂರ ಹಾಗೂ ಸಿಬ್ಬಂದಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದ್ದು, ಠಾಣೆಯಲ್ಲಿ ಪ್ರಕರಣ ಸಂಖ್ಯೆ 262/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ದಿನ ಮಹಾದ್ವಾರ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಕಪಿಲೇಶ್ವರ ಕಾಲನಿಯ ಪುನೀತ ಮಹಾಂತೇಶ ಕರಜಿಗಿಮಠ (18) ಎಂಬಾತನನ್ನೂ ಪಿಎಸ್ಐ ಮಣಿಕಂಠ ಹೂಜಾರಿ ಹಾಗೂ ಸಿಬ್ಬಂದಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ಖಚಿತವಾಗಿದ್ದು, ಆತನ ವಿರುದ್ಧವೂ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 263/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
