Chikkodi

ಚಿಕ್ಕೋಡಿಯಲ್ಲಿ ತಾಲೂಕಾ ಮಟ್ಟದ ‘ಗುರುಸ್ಪಂದನ’ಕಾರ್ಯಕ್ರಮ ಯಶಸ್ವಿ, ಶಿಕ್ಷಕರು ವೃತ್ತಿಯನ್ನು ಸಮಾಧಾನ ಮತ್ತು ತೃಪ್ತಿಯಿಂದ ಕಾರ್ಯನಿರ್ವಹಿಸಿ:ಡಿಡಿಪಿಐ ಅಜೀತ ಮನ್ನಿಕೇರಿ

Share

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಕಾಲಿಕವಾಗಿ ದೊರೆಯಬೇಕಾದ ಸೇವಾ ಸೌಲಭ್ಯಗಳನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ‘ಗುರುಸ್ಪಂದನ’ ಕಾರ್ಯಕ್ರಮಕ್ಕೆ ಚಿಕ್ಕೋಡಿ ತಾಲೂಕಿನಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಅಜೀತ ಮನ್ನಿಕೇರಿ ತಿಳಿಸಿದರು.

ಅವರು ಚಿಕ್ಕೋಡಿ ಪಟ್ಟಣದ ಡಯಟ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಚಿಕ್ಕೋಡಿ ಸಂಯುಕ್ತ ಆಶ್ರಯದಲ್ಲಿ ಮಜಲಟ್ಟಿ,ಕರೋಶಿ ಎಸ್ ಎಸ್ ಶಿಕ್ಷಕರ ಗುರು ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಸೇವಾ ಪುಸ್ತಕಗಳನ್ನು ಅವರಿಗೆ ನೀಡಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಪುಸ್ತಕದಲ್ಲಿರುವ ಮಾಹಿತಿಗಳು ಸರಿಯಾಗಿದ್ದರೆ ದೃಢೀಕರಿಸುವುದು ಮತ್ತು ಏನಾದರೂ ಸೌಲಭ್ಯಗಳು ಅಥವಾ ವಿವರಗಳು ಬಾಕಿ ಇದ್ದಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪಡೆಯಲು ಈ ಕಾರ್ಯಕ್ರಮ ನೆರವಾಗಲಿದೆ. ಶಿಕ್ಷಕರು ವೃತ್ತಿ ಸಮಾಧಾನ ಮತ್ತು ತೃಪ್ತಿಯಿಂದ ಕಾರ್ಯನಿರ್ವಹಿಸಬೇಕು ಎಂಬುದು ಶಿಕ್ಷಣ ಇಲಾಖೆಯ ಆಶಯವಾಗಿದೆ ಎಂದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲು ಶಿಕ್ಷಣ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸಚಿವರು ಹಾಗೂ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಶಿಕ್ಷಕರ ಸಭೆಗಳು, ಶಾಲಾ ಭೇಟಿಗಳು ಮತ್ತು ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಶೈಕ್ಷಣಿಕ ಜಿಲ್ಲೆಯ ಎಂಟೂ ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅನುಷ್ಠಾನಾಧಿಕಾರಿಗಳು ಸಮನ್ವಯದಿಂದ ಶ್ರಮಿಸುತ್ತಿದ್ದು, ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯಲಿದೆ ಎಂದು ಅಜೀತ ಮನ್ನಿಕೇರಿ ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಎನ್.ಜಿ. ಪಾಟೀಲ ಅವರು ಮಾತನಾಡಿ ಉಪನಿರ್ದೇಶಕರು ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಿದರು. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅಧ್ಯಕ್ಷತೆ ವಹಿಸುವುದರ ಜೊತೆಗೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಚಿಕ್ಕೋಡಿ ತಾಲೂಕಿನ ವಿವಿಧ ಕ್ಲಸ್ಟರ್‌ಗಳ (ಮಜಲಟ್ಟಿ, ಕರೋಸಿ, ಎಸಿಎಸಿ ಸೇರಿದಂತೆ ಇತರ ಸೆಂಟರ್‌ಗಳ) ವ್ಯಾಪ್ತಿಯಲ್ಲಿ ಉಭಯ ಶಿಕ್ಷಕರ ಸಂಘಗಳ ವತಿಯಿಂದ ಈ ಗುರುಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಕ್ಷಕರ ಸಮಸ್ಯೆಗಳು ಹಾಗೂ ಸೇವಾ ಪುಸ್ತಕ ದಾಖಲಾತಿಗೆ ಸಂಬಂಧಿಸಿದ ವಿಷಯಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಸ್ಥಳದಲ್ಲೇ ಇತ್ಯರ್ಥಪಡಿಸುವ ಕಾರ್ಯ ಕೈಗೊಳ್ಳಲಾಯಿತು.

ಇದರ ಜೊತೆಗೆ ಬೇಸಿಗೆ ಅವಧಿಯಲ್ಲಿ ನಡೆದ ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ, ರಾಜ್ಯ ಅಧ್ಯಕ್ಷರ ಮಾರ್ಗದರ್ಶನದಂತೆ ರಾಜ್ಯ ಮಟ್ಟದಿಂದ ಆದೇಶ ಬಂದ ತಕ್ಷಣ ಏಕಕಾಲದಲ್ಲಿ ದಾಖಲಾತಿ ಪ್ರಕ್ರಿಯೆ ಕೈಗೊಳ್ಳುವ ನಿರ್ಧಾರವನ್ನೂ ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಗಿದೆ.

ಈ ಸಂದರ್ಭದಲ್ಲಿ BEO ಪ್ರಭಾವತಿ ಪಾಟೀಲ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪಿ.ಡಿ.ಮಜಲಟ್ಟಿ, ಕಾರ್ಯದರ್ಶಿ ಸುನೀಲ ಖಡ್ಡ,ಖಜಾಂಜಿ,ಸೊಸೈಟಿ ಅಧ್ಯಕ್ಷರಾದ ಡಿ.ಎಚ್.ಕಾಂಬಳೆ,ಉಪಾಧ್ಯಕ್ಷರಾದ ಡಿ.ಆರ್.ಚಲವಾದಿ ಸೇರಿದಂತೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..

Tags:

error: Content is protected !!