ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ತೀವ್ರ ತಾರತಮ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಕಡ್ಡಾಯವಾಗಿ ಪಾಸ್ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ, ರಾಜ್ಯದ ಕೈಗಾರಿಕಾ ನೀತಿ 2020-25ರ ಪ್ರಕಾರ ಒಟ್ಟಾರೆ ಉದ್ಯೋಗಿಗಳಲ್ಲಿ ಶೇಕಡಾ 70ರಷ್ಟು ಹಾಗೂ ‘ಡಿ’ ದರ್ಜೆ ನೌಕರರಲ್ಲಿ ಶೇಕಡಾ 100ರಷ್ಟು ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಹಲವು ಖಾಸಗಿ ಕಂಪನಿಗಳು ಅದನ್ನು ಗಾಳಿಗೆ ತೂರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾವು ಹೊರರಾಜ್ಯದವರ ವಿರೋಧಿಗಳಲ್ಲ, ಆದರೆ ಉತ್ತರ ಕರ್ನಾಟಕ ಸೇರಿದಂತೆ ಬೀದರ್, ಮೈಸೂರು, ಚಾಮರಾಜನಗರ, ಕೋಲಾರದಂತಹ ರಾಜ್ಯದ ಮೂಲೆಮೂಲೆಯಿಂದ ಉದ್ಯೋಗ ಅರಸಿ ಬರುವ ನಮ್ಮ ಯುವಕರಿಗೆ ಅನ್ಯಾಯವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಬೆಂಗಳೂರಿನಲ್ಲಿ ಕೆಲಸ ನೀಡಲು ಕರ್ನಾಟಕದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಬದಲು, ಏರ್ ಇಂಡಿಯಾ ಸ್ಯಾಟ್ಸ್, ಸ್ನೈಡರ್ ಎಲೆಕ್ಟ್ರಿಕ್ ಹಾಗೂ ಅಲ್ಟ್ರಾ ವೈಲೆಟ್ನಂತಹ ಕಂಪನಿಗಳು ಜಾರ್ಖಂಡ್ ಮತ್ತು ಬಿಹಾರದಲ್ಲಿ ನೇಮಕಾತಿ ಡ್ರೈವ್ ನಡೆಸಿ ಅಭ್ಯರ್ಥಿಗಳನ್ನು ಕರೆತರುತ್ತಿವೆ; ಕೆಲವೆಡೆ “ಜಾರ್ಖಂಡ್ ಕ್ಯಾಂಡಿಡೇಟ್ಸ್ ಓನ್ಲಿ” ಎಂಬ ಜಾಹೀರಾತು ನೀಡಿರುವುದು ಕನ್ನಡಿಗರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದು ದಾಖಲೆ ಸಹಿತ ದೂರಿದರು.
ಇದರೊಂದಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಉತ್ತರಾಖಂಡ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಹೊಸೂರು ಮತ್ತು ಕೋಲಾರ ಘಟಕಗಳಲ್ಲಿ 4,000 ಮಹಿಳೆಯರಿಗೆ ಉದ್ಯೋಗ ನೀಡಲು ಮುಂದಾಗಿದ್ದು, ಹಾಗಾದರೆ ನಮ್ಮ ರಾಜ್ಯದ ಯುವತಿಯರಿಗೆ ಯಾವ ಉದ್ಯೋಗವಿದೆ ಎಂದು ಟೋಪಣ್ಣವರ ಖಾರವಾಗಿ ಪ್ರಶ್ನಿಸಿದರು. ಬಹುತೇಕ ಕಂಪನಿಗಳಲ್ಲಿ ಹೊರರಾಜ್ಯದ ಎಚ್ಆರ್ (HR) ಅಧಿಕಾರಿಗಳೇ ತುಂಬಿರುವುದರಿಂದ ತಮ್ಮ ರಾಜ್ಯದವರನ್ನೇ ನೇಮಿಸಿಕೊಳ್ಳುವ ಮೂಲಕ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ತಪ್ಪಿತಸ್ಥ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಕನ್ನಡ ಸಂಘಟನೆಗಳೇ ನೈತಿಕ ಪೊಲೀಸಿಂಗ್ಗೆ ಇಳಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದ ಅವರು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಉದ್ಯೋಗ ಮೀಸಲಾತಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸುವಂತೆ ಆಗ್ರಹಿಸಿದರು.
