Belagavi

ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ ಅನಿವಾರ್ಯ, ಆದರೆ ವೈದ್ಯರ ಅನುಭವಕ್ಕೆ ಪರ್ಯಾಯವಲ್ಲ:

Share

ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗುತ್ತಿದ್ದು, ಇಂದು ಅತ್ಯವಶ್ಯವಾಗಿದೆ. ಆರೋಗ್ಯ ಸೇವೆಯಲ್ಲಿನ ಸಂಕೀರ್ಣ ಪ್ರಕ್ರಿಯೆಗಳನ್ನು ಸರಳಗೊಳಿಸಿ, ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವಲ್ಲಿ ಎಐ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಜೊತೆಗೆ, ಉತ್ತಮ ಫಲಿತಾಂಶ ಪಡೆಯಲು ವೈದ್ಯಕೀಯ ದತ್ತಾಂಶವು ನೈಜವಾಗಿರಬೇಕು, ಪರಿಶೀಲನೆಗೆ ಒಳಪಟ್ಟಿರಬೇಕು ಹಾಗೂ ಅದರ ವಿಶ್ವಾಸಾರ್ಹತೆಯನ್ನು ದೃಢೀಕರಿಸಬೇಕು ಎಂದು ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶ್ರೀವಾತ್ಸವ ಅವರಿಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಆಯೋಜಿಸಿದ್ದ, ಎಐ (ಕೃತಕ ಬುದ್ದಿಮತ್ತೆ) ಆಧಾರಿತ ಆರೋಗ್ಯ ಸೇವೆ, ಡಿಜಿಟಲ್ ಆರೋಗ್ಯ ಮಾನದಂಡಗಳು, ದತ್ತಾಂಶ (ಡೇಟಾ) ರಕ್ಷಣೆ ಹಾಗೂ ಆಸ್ಪತ್ರೆಗಳ ಭವಿಷ್ಯದ ಕಾರ್ಯಯೋಜನೆ ಕುರಿತು ಎಐ ಆರೋಗ್ಯ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ತಂತ್ರಜ್ಞಾನದ ಬಳಕೆ ಅಗತ್ಯ ಮತ್ತು ಸ್ವಾಗತಾರ್ಹವಾದರೂ, ವೈದ್ಯರ ವೈದ್ಯಕೀಯ ಜ್ಞಾನ, ಅನುಭವ, ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಅವರು ಪ್ರತಿಪಾದಿಸಿದರು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಅವರು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ತಂತ್ರಜ್ಞಾನದ ಆವಿಷ್ಕಾರಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತಾಗಬೇಕು ಎಂಬುದು ಕೆಎಲ್ಇ ಸಂಸ್ಥೆಯ ಬದ್ಧತೆಯಾಗಿದೆ. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಅಳವಡಿಸಿಕೊಳ್ಳುವುದರ ಜೊತೆಗೆ ರೋಗಿಗಳ ಸುರಕ್ಷತೆ ಮತ್ತು ದತ್ತಾಂಶದ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಟಾರ್ ಹಾಸ್ಪಿಟಲ್ಸ್ನ ರಾಜೇಂದ್ರ ಕ್ಷೀರಸಾಗರ ಅವರು ಡಿಜಿಟಲ್ ಆರೋಗ್ಯ ಮಾನದಂಡಗಳ ಕುರಿತು, ನುವರ್ಟ್ ಸಂಸ್ಥಾಪಕ ನಿತಿನ್ ಗುಪ್ತಾ ಅವರು ಆಸ್ಪತ್ರೆಗಳಲ್ಲಿ ಎಐ ತಂತ್ರಜ್ಞಾನದ ಅನುಷ್ಠಾನದ ಕುರಿತು ಹಾಗೂ ಶ್ರೀಮತಿ ಕೃಷ್ಣವೇಣಿ ಅವರು ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (DPDP) ಕಾಯ್ದೆ, ಆರೋಗ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದ ಪ್ರಸ್ತುತ ಸ್ಥಿತಿ ಏನು? ಮುಂದಿನ ಹಾದಿ ಹೇಗಿರಬೇಕು?’ ಎಂಬ ವಿಷಯದ ಕುರಿತು ಲಾವಣ್ಯ ಕನಗರಾಜ, ಸುಂದರ್ ಅರುಮುಗಂ, ಸುನಿಲ್ ಬೆಳೂರು ಹಾಗೂ ಡಾ. ಅನಿಲ್ ಮಲ್ಲೇಶಪ್ಪ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಶ್ ಪವಾರ, ಕೆಎಲ್ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಶ್ವನಾಥ್ ಪಟ್ಟಣಶೆಟ್ಟಿ ಆಸ್ಪತ್ರೆಯ ಕ್ಲಿನಿಕಲ್‌ ಸರ್ವಿಸ್‌ ಡೈರೆಕ್ಟರ ಡಾ. ಮಾಧವ ಪ್ರಭು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥರಾದ ರವಿ ಸಂಕೇಶ್ವರ ಅವರು ವಂದಿಸಿದರು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಪುಣೆ, ಹುಬ್ಬಳ್ಳಿ ಹಾಗೂ ಬೆಳಗಾವಿ ಸೇರಿದಂತೆ ವಿವಿಧ ನಗರಗಳ ಪ್ರಮುಖ ಆಸ್ಪತ್ರೆಗಳ ಸಿಇಒಗಳು, ವೈದ್ಯಕೀಯ ನಿರ್ದೇಶಕರು ಮತ್ತು ಐಟಿ ತಜ್ಞರು ಸೇರಿದಂತೆ 150ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Tags:

error: Content is protected !!