ಬೆಳಗಾವಿ ನಗರದಾದ್ಯಂತ ಕ್ರೈಸ್ತ ಬಾಂಧವರು ಅತ್ಯಂತ ಶ್ರದ್ಧಾಭಕ್ತಿಯಿಂದ ‘ಕ್ರೈಸ್ಟ್ ದಿ ಕಿಂಗ್’ ಹಬ್ಬವನ್ನು ಆಚರಿಸಿದರು. ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಧಾರ್ಮಿಕ ಮೆರವಣಿಗೆ ನಡೆಸಲಾಯಿತು.

ಭಾನುವಾರ ಬೆಳಗಾವಿ ನಗರದ ವಿವಿಧ ಚರ್ಚ್ಗಳ ವ್ಯಾಪ್ತಿಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕ್ರೈಸ್ತ ಬಾಂಧವರು ಒಂದೆಡೆ ಸೇರಿ ‘ಕ್ರೈಸ್ಟ್ ದಿ ಕಿಂಗ್’ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಸಂಜೆ 4 ಗಂಟೆಗೆ ನಗರದ ಫಾತಿಮಾ ಕೆಥೆಡ್ರಲ್ನಲ್ಲಿ ವಿಶೇಷ ಪ್ರಾರ್ಥನಾ ಸೇವೆಯೊಂದಿಗೆ ಆರಂಭವಾದ ಭವ್ಯ ಧಾರ್ಮಿಕ ಮೆರವಣಿಗೆಯು ಸೇಂಟ್ ಪಾಲ್ ಹೈಸ್ಕೂಲ್, ಹೈ ಸ್ಟ್ರೀಟ್, ಕ್ಯಾಟಲ್ ರಸ್ತೆ, ಹ್ಯಾವ್ಲಾಕ್ ರಸ್ತೆ ಹಾಗೂ ಖಾನಾಪುರ ರಸ್ತೆ ಮಾರ್ಗವಾಗಿ ಸಾಗಿ ಸಂಜೆ 6 ಗಂಟೆಯ ಸುಮಾರಿಗೆ ಸೇಂಟ್ ಆಂಥೋನಿ ಚರ್ಚ್ನಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯ ಸಮಾರೋಪ ಹಂತದಲ್ಲಿ ಬಿಷಪ್ ಡೆರೆಕ್ ಫರ್ನಾಂಡಿಸ್ ಅವರು ಪವಿತ್ರ ಸಂಸ್ಕಾರವನ್ನು (Blessed Sacrament) ಹಿಡಿದು ಮುನ್ನಡೆಸಿದ್ದು, ನೂರಾರು ಭಕ್ತರು ಭಕ್ತಿಗೀತೆಗಳು ಹಾಗೂ ಪ್ರಾರ್ಥನೆಯೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಬಿಷಪ್ ಡೆರೆಕ್ ಫರ್ನಾಂಡಿಸ್ ಅವರು, ಯೇಸುಕ್ರಿಸ್ತರ ಬೋಧನೆಗಳನ್ನು ಸ್ಮರಿಸುತ್ತಾ ಪ್ರಸ್ತುತ ಸಮಾಜದಲ್ಲಿ ಶಾಂತಿ, ಪ್ರೀತಿ, ಕರುಣೆ ಹಾಗೂ ಪರಸ್ಪರ ಸೌಹಾರ್ದತೆಯನ್ನು ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ನಗರದ ವಿವಿಧ ಪ್ಯಾರಿಷ್ಗಳ ಭಕ್ತರು ಈ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೈಸ್ತ ಏಕತೆ ಮತ್ತು ಸಮುದಾಯದ ಬಾಂಧವ್ಯವನ್ನು ಪ್ರದರ್ಶಿಸಿದರು.
