ವಿಶ್ವಗುರು ಬಸವಣ್ಣ ನವರ ಕುರಿತು ಲೇಖಕ ರವಿ ಹಂಜ್ ನೀಡಿರುವರೆನ್ನಲಾದ ಅವಹೇಳನ ಕಾರಿ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ವಿಜಯಪುರ ಜಿಲ್ಲೆಯಲ್ಲೂ ಪ್ರತಿಭಟನೆಗಳ ಕಾವು ಹೆಚ್ಚಾಗಿದೆ. ವಿಜಯಪುರ ನಗರ ಹಾಗೂ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲಿ ಬಸವ ಅಭಿಮಾನಿಗಳು ಮತ್ತು ಲಿಂಗಾಯತ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಜಿಲ್ಲೆಯಲ್ಲಿ ಎರಡು ಕಡೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಇದೀಗ ರವಿ ಹಂಜ್ ಬಂಧನವಾಗಿರುವ ಸುದ್ದಿ ವಿವಾದಕ್ಕೆ ಮತ್ತಷ್ಟು ಮಹತ್ವ ತಂದಿದೆ. ಈ ಕುರಿತ ವರದಿ ಇಲ್ಲಿದೆ.

ವಿಶ್ವಗುರು ಬಸವಣ್ಣನವರ ಕುರಿತು ರವಿ ಹಂಜ್ ನೀಡಿರುವರೆನ್ನಲಾದ ಹೇಳಿಕೆಗಳು ಬಸವ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ವಿಜಯಪುರ ನಗರದ ವಿವಿಧೆಡೆ ಬಸವ ಅಭಿಮಾನಿಗಳು ಹಾಗೂ ಲಿಂಗಾಯತ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಲೇಖಕ ರವಿ ಹಂಜ್ ವಿರುದ್ಧ ಕಿಡಿಕಾರಿದರು. ಬಸವಣ್ಣನವರು ಕೇವಲ ಒಂದು ಸಮುದಾಯದ ಧರ್ಮಗುರುಗಳಲ್ಲ, ಅವರು ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕರು. ಅಂತಹ ಮಹಾನ್ ವ್ಯಕ್ತಿತ್ವದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಹೇಳಿಕೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲೂ ಹಾಗೂ ವಿಜಯಪುರ ನಗರದಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿತ್ತು. ಬಸವಣ್ಣನವರ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ ಬಸವ ಅಭಿಮಾನಿಗಳು ಹಾಗೂ ಲಿಂಗಾಯತ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವ, ವಿಚಾರಧಾರೆ ಮತ್ತು ವಚನ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ಇದೆ. ಇಂತಹ ಮಹಾನ್ ಚೇತನದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ಖಂಡನೀಯ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವಿಚಾರವಾಗಿ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಹಾಗೂ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಬೆಂಗಳೂರು ಹಾಗೂ ಬೆಳಗಾವಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಇನ್ನೂ ರವಿ ಹಂಜ್ ನನ್ನು ಬಂಧಿಸಲು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಕೊಚ್ಚಿಯ ವಿಮಾನ ನಿಲ್ದಾಣದಲ್ಲಿ ಹಂಜ್ ನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯು ಮಹತ್ವ ಪಡೆದಿದೆ.
ಒಟ್ಟಿನಲ್ಲಿ, ವಿಶ್ವಗುರು ಬಸವಣ್ಣನವರ ಕುರಿತು ಕೇಳಿಬಂದಿರುವ ಹೇಳಿಕೆಗಳು ರಾಜ್ಯಾದ್ಯಂತ ಬಸವ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಿಜಯಪುರ ಜಿಲ್ಲೆಯಲ್ಲೂ ಪ್ರತಿಭಟನೆಗಳ ಮೂಲಕ ಆಕ್ರೋಶ ಹೊರಹಾಕಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
