ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ ಎಂಬ ಶಂಕೆಯಿಂದ ಪತಿಯೊಬ್ಬ ತನ್ನ ಸ್ನೇಹಿತನ ಮೇಲೆಯೇ ಭೀಕರವಾಗಿ ಆಸಿಡ್ ದಾಳಿ ನಡೆಸಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಕರೆ ಮಾಡಿ ಮಾತನಾಡಬೇಕೆಂದು ಕರೆಸಿಕೊಂಡು ಈ ದುಷ್ಕೃತ್ಯ ಎಸಗಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಶಶಿಕುಮಾರ್ ಎಂಬಾತನ ಮೇಲೆ ನವೀನ್ ಎಂಬ ಆರೋಪಿ ಆಸಿಡ್ ಎರಚಿದ್ದಾನೆ. ಖಾಸಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿ ನವೀನ್ ಪತ್ನಿಗೆ ಶಶಿಕುಮಾರ್ ಪರಿಚಯವಾಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಕೆರಳಿದ್ದ ನವೀನ್, ಮಾತನಾಡಬೇಕು ಎಂದು ಫೋನ್ ಮಾಡಿ ಶಶಿಕುಮಾರ್‌ನನ್ನು ಕರೆಸಿಕೊಂಡಿದ್ದಾನೆ. ಈ ವೇಳೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ, ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಘಟನೆಯಲ್ಲಿ ಶಶಿಕುಮಾರ್ ಮುಖ, ಹೊಟ್ಟೆ ಹಾಗೂ ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಎಸ್ಕೇಪ್ ಆಗಿದ್ದ ಆರೋಪಿ ನವೀನ್‌ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
