Banglore

ಬೆಂಗಳೂರು ಪೊಲೀಸ್ ಕಮಿಷನರೇಟ್‌ಗೆ ಮೇಜರ್ ಸರ್ಜರಿ; 5 ಹೊಸ ವಿಭಾಗಗಳ ರಚನೆ ನೂತನ ಚೀಫ್ ಕಮಿಷನರ್ ಆಗಿ ಆರ್. ಹಿತೇಂದ್ರ; ಟ್ರಾಫಿಕ್ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್‌ ನೇಮಕ

Share

ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಬೃಹತ್ ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಇನ್ನು ಐದು ಪ್ರತ್ಯೇಕ ವಿಭಾಗಗಳಾಗಿ ವಿಭಜಿಸಿ ಮಹತ್ವದ ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದ್ದು, ಬರೋಬ್ಬರಿ 30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತಂದಿರುವ ರಾಜ್ಯ ಸರ್ಕಾರ, ಕಮಿಷನರೇಟ್ ಅನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ 5 ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಂಗಡಿಸಿದೆ. ನಗರದ ನೂತನ ಚೀಫ್ ಕಮಿಷನರ್ ಆಫ್ ಪೊಲೀಸ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ನೇಮಕಗೊಂಡಿದ್ದು, ಈವರೆಗೆ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ನೂತನವಾಗಿ ರಚನೆಯಾಗಿರುವ 5 ಕಮಿಷನರೇಟ್‌ಗಳಿಗೆ ಕ್ರಮವಾಗಿ ಲಭು ರಾಮ್ (ಕೇಂದ್ರ), ಡಾ. ಪಿ.ಎಸ್. ಹರ್ಷ (ಪೂರ್ವ), ವಿಕಾಶ್ ಕುಮಾರ್ ವಿಕಾಶ್ (ಪಶ್ಚಿಮ), ಡಾ. ಎಂ.ಬಿ. ಬೋರಲಿಂಗಯ್ಯ (ಉತ್ತರ) ಹಾಗೂ ಸಿ. ವಂಶಿ ಕೃಷ್ಣ (ದಕ್ಷಿಣ) ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ. ಜೊತೆಗೆ, ಹೇಮಂತ್ ನಿಂಬಾಳ್ಕರ್ ಅವರಿಗೆ ಬೆಂಗಳೂರು ಟ್ರಾಫಿಕ್ ಕಮಿಷನರ್ ಹಾಗೂ ಆಂಟಿ ರೌಡಿ ಸ್ಕ್ವಾಡ್‌ನ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಮತ್ತೊಂದೆಡೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಎಡಿಜಿಪಿಯಾಗಿ ಬಿಜಯ್ ಕುಮಾರ್ ಸಿಂಗ್, ಲೋಕಾಯುಕ್ತ ಎಡಿಜಿಪಿಯಾಗಿ ಎಸ್. ಮುರುಗನ್ ಹಾಗೂ ಕಮ್ಯುನಿಕೇಷನ್ ವಿಭಾಗಕ್ಕೆ ಮನೀಷ್ ಖರ್ಬಿಕರ್ ಅವರನ್ನು ವರ್ಗಾಯಿಸಲಾಗಿದೆ. ಪಶ್ಚಿಮ ವಲಯ ಐಜಿಪಿಯಾಗಿ ಎನ್. ಶಶಿ ಕುಮಾರ್, ಕೆಎಸ್‌ಆರ್‌ಪಿ ಐಜಿಪಿಯಾಗಿ ಅನುಪಮ್ ಅಗರವಾಲ್ ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಆರ್. ಜೈನ್ ನೇಮಕಗೊಂಡಿದ್ದಾರೆ. ಇದರೊಂದಿಗೆ, ವಿಜಯಪುರ ಎಸ್‌ಪಿಯಾಗಿದ್ದ ಲಕ್ಷ್ಮಣ್ ನಿಂಬರ್ಗಿ (ಸಿಎಆರ್), ತುಮಕೂರು ಎಸ್‌ಪಿಯಾಗಿದ್ದ ಅಶೋಕ್ ಕೆ.ವಿ (ಪೀಣ್ಯ), ಚೆನ್ನಬಸವಣ್ಣ ಲಂಗೋಟಿ, ನಾಗೇಶ್ ಡಿ.ಎಲ್, ಡಾ. ಗೀತಾ ಎಂ.ಎಸ್ ಹಾಗೂ ಪಿ.ವಿ. ಸ್ನೇಹ ಸೇರಿದಂತೆ ಹಲವು ಅಧಿಕಾರಿಗಳನ್ನು ಬೆಂಗಳೂರಿನ ವಿವಿಧ ವಿಭಾಗಗಳ ಡಿಸಿಪಿಗಳಾಗಿ ನಿಯೋಜಿಸಿ ಸರ್ಕಾರ ಆದೇಶಿಸಿದೆ.

Tags:

error: Content is protected !!