BELAGAVI

ಬೆಳಗಾವಿಯಲ್ಲಿ ಅಖಿಲ ಭಾರತ ಎನ್‌ಸಿಸಿ ಟ್ರೆಕ್ಕಿಂಗ್(ಚಾರಣ) ಶಿಬಿರಕ್ಕೆ ಉತ್ಸಾಹಭರಿತ ಚಾಲನೆ

Share

ಬೆಳಗಾವಿ : ಎನ್‌ಸಿಸಿ (NCC) ಬೆಳಗಾವಿ ಘಟಕವು 26 ಕರ್ನಾಟಕ ಬಟಾಲಿಯನ್‌ ಅಡಿಯಲ್ಲಿ ಜಾಧವನಗರದಲ್ಲಿ ನವೆಂಬರ್ 15 ರಿಂದ 22ರವರೆಗೆ ಅಖಿಲ ಭಾರತ ಬೆಳಗಾವಿ ಟ್ರೆಕ್ಕಿಂಗ್(ಚಾರಣ) 8 ದಿನಗಳ ಶಿಬಿರವನ್ನು ಆಯೋಜಿಸಿದೆ. ದೇಶದ ವಿವಿಧ ರಾಜ್ಯಗಳಿಂದ ಒಟ್ಟು 510 ಕೆಡೆಟ್‌ಗಳು ಈ ಎಂಟು ದಿನಗಳ ಟ್ರೆಕ್ಕಿಂಗ್ ಶಿಬಿರದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.

ಕರ್ನಾಟಕ ಮತ್ತು ಗೋವಾ, ಆಂಧ್ರ, ತೆಲಂಗಾಣ, ಪಾಂಡಿಚೇರಿ, ತಮಿಳುನಾಡು,ಕೇರಳ, ಲಕ್ಷದೀಪ ರಾಜ್ಯಗಳ ಕೆಡೆಟ್‌ಗಳು ಬೆಳಗಾವಿ ಗಡಿಭಾಗದಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಅರಣ್ಯ ಪ್ರದೇಶಗಳಲ್ಲಿ ಈ ಟ್ರೆಕ್ಕಿಂಗ್(ಚಾರಣ) ಅಭಿಯಾನ ನಡೆಸಲಿದ್ದಾರೆ. ಕೆಡೆಟ್‌ಗಳಿಗೆ ಸಾಹಸ, ಪ್ರಕೃತಿ ಅನ್ವೇಷಣೆ ಹಾಗೂ ರಾಷ್ಟ್ರೀಯ ಏಕತೆಯ ಅನುಭವ ಪಡೆಯಲು ಈ ಶಿಬಿರ ಉತ್ತಮ ಅವಕಾಶ ಕಲ್ಪಿಸಿದೆ. ಎನ್‌ಸಿಸಿ ಘಟಕ ಮೂಲಕ ಕೆಡೆಟ್‌ಗಳು ಶಿಸ್ತು, ನಾಯಕತ್ವ, ಸಾಹಸ ಮನೋಭಾವ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಮಹತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅವಕಾಶ ದೊರೆಯುತ್ತದೆ. ಎನ್‌ಸಿಸಿ ವತಿಯಿಂದ ಆಯೋಜಿಸಲಾಗುವ ವಿವಿಧ ಚಟುವಟಿಕೆಗಳು ಕೆಡೆಟ್‌ಗಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರಕೃತಿಯ ಮಡಿಲಲ್ಲಿ ಸಾಹಸದ ಅನುಭವ ಪಡೆಯಲು ಈ ಶಿಬಿರ ನೆರವಾಗುತ್ತದೆ. ಪ್ರತಿದಿನ 10ರಿಂದ 15 ಕಿಲೋಮೀಟರ್ ನಡೆಯುವ ಕೆಡೆಟ್‌ಗಳು ಭವಿಷ್ಯದಲ್ಲಿ 50 ಕಿಲೋಮೀಟರ್‌ವರೆಗೆ ನಡೆಯುವ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು. ಇಂತಹ ಚಟುವಟಿಕೆಗಳಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಆತ್ಮವಿಶ್ವಾಸ, ತಾಳ್ಮೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವವೂ ಬೆಳೆಯುತ್ತದೆ ಎಂದು ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್, ಸೇನಾ ಮೆಡಲ್ ಹಾಗೂ ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತರಾದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟರು.

ಮುಂದುವರಿದು ಮಾತನಾಡಿದ ಬ್ರಿಗೇಡಿಯರ್ ಉಪಾಧ್ಯಾಯ ಅವರು, ಈ ಟ್ರೆಕ್ಕಿಂಗ್ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಪ್ರದೇಶಗಳಿಂದ ಕೆಡೆಟ್‌ಗಳು ಭಾಗವಹಿಸಿದ್ದಾರೆ. ಇದರಿಂದ ವಿವಿಧ ಭಾಷೆಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಜೀವನಶೈಲಿ ಹಾಗೂ ವಿಚಾರಧಾರೆಗಳನ್ನು ಅರಿತುಕೊಳ್ಳಲು ಅವರಿಗೆ ಅವಕಾಶ ದೊರೆಯುತ್ತದೆ. ವಿವಿಧ ರಾಜ್ಯಗಳ ಕೆಡೆಟ್‌ಗಳು ಒಂದೆಡೆ ಸೇರಿ ಪರಸ್ಪರ ಸಂವಾದ ನಡೆಸುವುದರಿಂದ ಸಾಂಸ್ಕೃತಿಕ ವಿನಿಮಯ ಸಾಧ್ಯವಾಗುತ್ತದೆ. ಇದರಿಂದ ರಾಷ್ಟ್ರೀಯ ಏಕತೆ, ಸಹೋದರತ್ವ ಹಾಗೂ ಪರಸ್ಪರ ಸಹಕಾರದ ಭಾವನೆ ಮತ್ತಷ್ಟು ಬಲಗೊಳ್ಳುತ್ತದೆ. ಇಂತಹ ಮಹತ್ವದ ಹಾಗೂ ಸ್ಮರಣೀಯ ಅವಕಾಶವನ್ನು ಕೆಡೆಟ್‌ಗಳಿಗೆ ಕಲ್ಪಿಸಿರುವ ಬೆಳಗಾವಿ ಎನ್‌ಸಿಸಿ ಗ್ರೂಪ್ ಮುಖ್ಯಾಲಯ ಮತ್ತು 26 ಕರ್ನಾಟಕ ಬಟಾಲಿಯನ್ ಎನ್‌ಸಿಸಿಯ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಕೆಡೆಟ್‌ಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಶಿಸ್ತು, ಸುರಕ್ಷತೆ ಹಾಗೂ ತಂಡದ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಬೆಳಗಾವಿ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರ್ ಅವರು ಮುಖ್ಯ ಅತಿಥಿಗಳಾದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅವರಿಗೆ ಸ್ಮರಣಿಕೆಯೊಂದನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ 26 ಕರ್ನಾಟಕ ಬಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ್ ದಾಗರ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸೇನಾ ಮೆಡಲ್ ಪುರಸ್ಕೃತ ಎಸ್. ರೇಡೂ, , ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ ಸೇರಿದಂತೆ ಎನ್‌ಸಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಕೆಡೆಟ್‌ಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅವರು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಟ್ರೆಕ್ಕಿಂಗ್ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕೆಡೆಟ್‌ಗಳು ಉತ್ಸಾಹದಿಂದ ಟ್ರೆಕ್ಕಿಂಗ್‌ಗಾಗಿ ಪ್ರಯಾಣ ಬೆಳೆಸಿದರು.

Tags:

error: Content is protected !!