ಬೆಳಗಾವಿಯ ಜನಪ್ರಿಯ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಹುಟ್ಟುಹಬ್ಬವನ್ನು ಇಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗಾವಿಯ ಅವರ ನಿವಾಸಕ್ಕೆ ಮುಂಜಾನೆಯಿಂದಲೇ ಹರಿದುಬಂದ ಅಪಾರ ಪ್ರಮಾಣದ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಗಣ್ಯರು ನೆಚ್ಚಿನ ನಾಯಕನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಬೆಳಗಾವಿಯ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಆಗಮಿಸಿದ ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಕೇಕ್ ಕತ್ತರಿಸಿ, ಹೂಗುಚ್ಛ ನೀಡಿ ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿದರು.

ಈ ವಿಶೇಷ ಸಂದರ್ಭದಲ್ಲಿ ಶ್ರೀಮಠದ ಸ್ವಾಮೀಜಿಗಳು ಸಹ ಪಾಲ್ಗೊಂಡು, ಚನ್ನರಾಜ್ ಅವರ ಸಮಾಜಪರ ಕಾಳಜಿ ಮತ್ತು ಜನರೊಂದಿಗಿನ ಪ್ರೀತಿಯ ಒಡನಾಟವನ್ನು ಶ್ಲಾಘಿಸಿ, ಬಸವಾದಿ ಶಿವಶರಣರ ಆಶೀರ್ವಾದದೊಂದಿಗೆ ಅವರಿಗೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹರಸಿದರು.
ಸಹೋದರನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅಕ್ಕ, ತಾಯಿ ಮತ್ತು ಗುರುವಿನ ಸ್ಥಾನದಲ್ಲಿ ನಿಂತು ತುಂಬು ಹೃದಯದಿಂದ ಆಶೀರ್ವದಿಸಿದರು. ಐವರು ಅಕ್ಕ-ತಂಗಿಯರಿಗೆ ಮುತ್ತಿನಂತಹ ತಮ್ಮನಾಗಿ ಸಿಕ್ಕಿರುವ ಚನ್ನರಾಜ್, ತಮಗೆ ಬೆನ್ನೆಲುಬಾಗಿ ನಿಂತಿರುವುದನ್ನು ಸ್ಮರಿಸಿ ಭಾವುಕರಾದರು. ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿಯುತವಾಗಿ ಬೆಳೆದು ಈ ಮಟ್ಟಕ್ಕೆ ಏರಲು ಜನರ ಆಶೀರ್ವಾದ ಹಾಗೂ ಅವರ ಆದರ್ಶ ನಡವಳಿಕೆಗಳೇ ಕಾರಣ ಎಂದ ಹೆಬ್ಬಾಳ್ಕರ್, ಭಗವಂತನು ಅವರಿಗೆ ಉತ್ತಮ ಆಯುಷ್ಯ, ಆರೋಗ್ಯ ನೀಡಿ, ಕಂಡ ಕನಸುಗಳೆಲ್ಲವೂ ನನಸಾಗುವಂತೆ ಹಾಗೂ ಇನ್ನಷ್ಟು ಉನ್ನತ ಹುದ್ದೆಗೇರಿ ಸಮಾಜಸೇವೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಉಚಗಾಂವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ಆನಂದ ದೇಸೂರಕರ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಚನ್ನರಾಜ್ ಹಟ್ಟಿಹೊಳಿ ಅವರಿಗೆ ಶುಭಾಶಯ ಕೋರಿದರು. ಕಳೆದ ಹಲವು ವರ್ಷಗಳಿಂದ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಮುಖಂಡರು, ಗ್ರಾಮೀಣ ಭಾಗದ ಶಾಲೆ, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ ಹಾಗೂ ಕಾರ್ಯಕರ್ತರ ಕೆಲಸಗಳನ್ನು ತಕ್ಷಣವೇ ಮಾಡಿಕೊಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಚನ್ನರಾಜ್ ಹಟ್ಟಿಹೊಳಿ ಅವರ ಜನ್ಮದಿನ ಅರ್ಥಪೂರ್ಣವಾಗಿ ನೆರವೇರಿತು.
