‘ಬಸವ ಮಂಟಪ’ ಎಂಬ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರು ಹಾಗೂ ವಚನ ಸಾಹಿತ್ಯದ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಾಗನೂರು ರುದ್ರಾಕ್ಷಿ ಮಠ ಮತ್ತು ಅಥಣಿ ಮೋಟಗಿ ಮಠದ ಶ್ರೀಗಳ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದು, ಲೇಖಕ ರವಿ ಹಂಜಿ ಹಾಗೂ ಖಾಸಗಿ ಪತ್ರಿಕೆ ಸಂಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅನಿವಾಸಿ ಭಾರತೀಯ ಲೇಖಕ ರವಿ ಹಂಜಿಗಿ ಮಠ್ ಅವರು ‘ಬಸವ ಮಂಟಪ’ ಕೃತಿ ಹಾಗೂ ಸಂದರ್ಶನವೊಂದರಲ್ಲಿ ಬಸವಾದಿ ಶಿವಶರಣರು ಮತ್ತು ಲಿಂಗಾಯತರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹಾಗೂ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಲೇಖಕ ರವಿ ಹಂಜಿ ಹಾಗೂ ಕೃತಿ ಪ್ರಚಾರ ಮಾಡಿದ ಖಾಸಗಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ್ ರೋಟ್ಟಿ ಅವರು, ಪುಸ್ತಕ ಮುಟ್ಟುಗೋಲು ಹಾಕಿಕೊಂಡು ಎಫ್ಐಆರ್ ದಾಖಲಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು. ಆದರೆ, ಈ ಕೃತ್ಯದ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕೇವಲ ಇಬ್ಬರು ಮಾತ್ರ ಇದರಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಷಡ್ಯಂತ್ರಗಾರರು ಮತ್ತು ಪ್ರಚೋದನಾಕಾರರನ್ನು ಪತ್ತೆಹಚ್ಚಲು ಮುಖ್ಯಮಂತ್ರಿಗಳು ತಕ್ಷಣವೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು ಹಾಗೂ ಮುಂದೆ ಮಹಾಪುರುಷರಿಗೆ ಅವಹೇಳನವಾದಾಗ ಸ್ವಯಂಪ್ರೇರಿತ ದೂರು ದಾಖಲಿಸಲು ಪ್ರತ್ಯೇಕ ವಿಚಕ್ಷಣ ದಳ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಇನ್ನೊಂದೆಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಮಾತನಾಡಿ, ಬಸವಣ್ಣನವರ ಇತಿಹಾಸವನ್ನು ತುಳಿಯುವ ದುರುದ್ದೇಶದಿಂದ ಈ ಕೃತಿ ರಚಿಸಲಾಗಿದೆ ಎಂದು ಕಿಡಿಕಾರಿದರು. ಸರ್ಕಾರ ಕೇವಲ ಎಫ್ಐಆರ್ ದಾಖಲಿಸಿ ಲಿಂಗಾಯತ ಸಮಾಜವನ್ನು ಓಲೈಸುವ ತಂತ್ರ ಮಾಡಬಾರದು. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು, ಒಂದು ವೇಳೆ ನಾಳೆಯೊಳಗೆ ಬಂಧನವಾಗದಿದ್ದರೆ ರಾಜ್ಯಾದ್ಯಂತ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಅಶೋಕ ಬೆಂಡಿಗೇರಿ, ಅಶೋಕ ಮಳಗಲಿ, ಮುರುಗೇಶ ಶಿವಪೂಜಿ, ಸುರೇಶ್ ನರಗುಂದ, ಸಂತೋಷ ಗುಡಸ್, ರಾಜು ಕುಂದಗೋಳ, ಸಿ.ಎಂ. ಬೂದಿಹಾಳ, ಈರಣ್ಣ ದೇಯನ್ನವರ, ಎಸ್.ಜಿ ಸಿದ್ನಾಳ್, ಆನಂದ ಗುಡಸ್, ಸೂರ್ಯಕಾಂತ ಭಾವಿ, ಡಾ.ಎಸ್.ಎಂ. ದೊಡ್ಡಮನಿ, ಮುರಿಗೆಪ್ಪ ಬಾಳಿ, ಶಂಕರ್ ಗುಡಸ್, ಶಿವಾನಂದ ಮೇಟ್ಯಾಳ್, ಬಿ.ಆರ್. ಪೊಲೀಸ್ ಪಾಟೀಲ್ ಸೇರಿದಂತೆ ವಿವಿಧ ಲಿಂಗಾಯಿತ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
