ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಭೀಕರ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಬಾಡಿಗೆ ಹಾಗೂ ಸಾಲದ ಹಣ ಕೇಳಿದ್ದಕ್ಕೆ ಮಾಲೀಕನನ್ನು ಕೊಂದು ದೇಹವನ್ನು ತುಂಡರಿಸಿ ಬಾವಿಗೆ ಎಸೆದಿದ್ದ ನಾಲ್ವರು ಹಂತಕರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವನೂರು ಗ್ರಾಮದಲ್ಲಿ ಸಿನಿಮೀಯ ರೀತಿಯಲ್ಲಿ ನಡೆದಿದ್ದ ಈ ಕೊಲೆ ಪ್ರಕರಣ ಬಯಲಾಗಿದ್ದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವನೂರು ಗ್ರಾಮದ ನಿವಾಸಿ ಅಶೋಕ ಅಂಗಡಿ (64) ಕೊಲೆಯಾದ ದುರ್ದೈವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಡೆಂಗಿ (24), ಸಂದೀಪ್ ಡೆಂಗಿ (25), ರಮೇಶ ಜಾಲವಾದಿ (22) ಹಾಗೂ ಸಂಗನಗೌಡ ಗೊಟಗುಣಕಿ (20) ಎಂಬ ನಾಲ್ವರು ಆರೋಪಿಗಳನ್ನು ಹುನಗುಂದ ಪೊಲೀಸರು ಬಂಧಿಸಿದ್ದಾರೆ. ಮೃತ ಅಶೋಕ ಅವರು ಆರೋಪಿಗಳಾದ ಸಂದೀಪ್ ಮತ್ತು ಸುದೀಪ್ ಅವರಿಗೆ ಮೆಡಿಕಲ್ ಶಾಪ್ ನಡೆಸಲು ತಮ್ಮ ಕಾಂಪ್ಲೆಕ್ಸ್ನಲ್ಲಿ ಅಂಗಡಿ ಬಾಡಿಗೆ ನೀಡಿದ್ದರು ಹಾಗೂ ಸಾಲವನ್ನೂ ಕೊಟ್ಟಿದ್ದರು. ಕಳೆದ ಮಾರ್ಚ್ 12ರಂದು ಬಾಡಿಗೆ ಮತ್ತು ಸಾಲದ ಹಣ ವಾಪಸ್ ಕೇಳಿದ ವಿಚಾರವಾಗಿ ಆರೋಪಿಗಳು ಅಶೋಕ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು, ರಾಡ್ನಿಂದ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದರು.

ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸಲು ಮುಂದಾದ ಹಂತಕರು, ಮೃತದೇಹವನ್ನು ಚೀಲದಲ್ಲಿ ತುಂಬಿ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ವಿಜಯಪುರಕ್ಕೆ ಕೊಂಡೊಯ್ದಿದ್ದರು. ವಿಜಯಪುರದ ಎಪಿಎಂಸಿ ಬಳಿಯ ಕೊಳಚೆ ಬಾವಿಯ ಸಮೀಪ ಕೊಡಲಿಯಿಂದ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಎರಡು ಟ್ರಂಕ್ಗಳಲ್ಲಿ ತುಂಬಿ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದರು. ಕಳೆದ ಎಂಟು ತಿಂಗಳಿಂದ ಈ ನಾಪತ್ತೆ ಪ್ರಕರಣದ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಸೆಪ್ಟೆಂಬರ್ 11ರಂದು ಮೃತರ ಪತ್ನಿ ಮಹಾದೇವಿ ಅವರು ಆರೋಪಿಗಳಾದ ಸುದೀಪ್ ಮತ್ತು ಸಂದೀಪ್ ಮೇಲೆ ಅನುಮಾನ ವ್ಯಕ್ತಪಡಿಸಿ ಹುನಗುಂದ ಠಾಣೆಯಲ್ಲಿ ಕೊಲೆ ಶಂಕೆ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಆರೋಪಿಗಳು ಮೃತ ಅಶೋಕ ಅವರ ‘ಫೋನ್ ಪೇ’ ಖಾತೆಯನ್ನು ಬಳಸಿರುವುದು ನಿರ್ಣಾಯಕ ಸುಳಿವು ನೀಡಿತು. ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
