Belagavi

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಪಾಪಿ ಮೊಮ್ಮಗ: ಬೆಳಗಾವಿಯಲ್ಲಿ ಬೆಚ್ಚಿಬೀಳಿಸುವ ಘಟನೆ!

Share

ಬೆಳಗಾವಿಯಲ್ಲಿ ಹಣದ ದಾಹಕ್ಕೆ ಸಂಬಂಧಗಳೇ ಬೆಲೆ ಕಳೆದುಕೊಂಡಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರದ ‘ಗೃಹಲಕ್ಷ್ಮೀ’ ಯೋಜನೆಯ ಹಣದಲ್ಲಿ ಪಾಲು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ, ಹೆತ್ತ ತಾಯಿಯ ಸಮಾನಳಾದ 78 ವರ್ಷದ ಅಜ್ಜಿಯನ್ನೇ ಸ್ವಂತ ಮೊಮ್ಮಗನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ 78 ವರ್ಷದ ಹಮ್ಮನ್ನಾ ಬಾಳಪ್ಪಾ ಸನದಿ ಕೊಲೆಯಾದ ದುರ್ದೈವಿ ವೃದ್ಧೆ. ಕಳೆದ ನವೆಂಬರ್ 10ರಂದು ಅಂಕಲಗಿ ಸೊಸೈಟಿಯಿಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಡ್ರಾ ಮಾಡಿಕೊಂಡು ವೃದ್ಧೆ ಮನೆಗೆ ಮರಳುತ್ತಿದ್ದರು. ಈ ವೇಳೆ ಹಣದ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20), ಅಜ್ಜಿಯನ್ನು ಊರಿಗೆ ಬಿಡುವುದಾಗಿ ನಂಬಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ದಾರಿ ಮಧ್ಯೆ ಗವಿ ಸಿದ್ದೇಶ್ವರ ಗುಡ್ಡದ ಕಚ್ಚಾ ರಸ್ತೆಗೆ ಕರೆದೊಯ್ದ ಪಾಪಿ ಮೊಮ್ಮಗ, ಗೃಹಲಕ್ಷ್ಮೀ ಹಣದಲ್ಲಿ ತನಗೂ ಪಾಲು ನೀಡುವಂತೆ ಜಗಳ ತೆಗೆದಿದ್ದಾನೆ.

ಅಜ್ಜಿ ಹಣ ನೀಡಲು ನಿರಾಕರಿಸಿದಾಗ ರೊಚ್ಚಿಗೆದ್ದ ಭೀಮಪ್ಪ, ಆಕೆಯನ್ನು ಕೆಳಗೆ ತಳ್ಳಿ ಕತ್ತು ಹಿಸುಕಿ, ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ವೃದ್ಧೆಯ ಬಳಿಯಿದ್ದ 2,300 ರೂಪಾಯಿ ನಗದು ಹಾಗೂ ಕೊರಳಲ್ಲಿದ್ದ ಎರಡು ಚಿನ್ನದ ಸರಗಳನ್ನು ದೋಚಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಎರಡು ಗೋಣಿ ಚೀಲಗಳಲ್ಲಿ ತುಂಬಿ, ಅದಕ್ಕೆ ದೊಡ್ಡ ಕಲ್ಲುಗಳನ್ನು ಕಟ್ಟಿ ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಹಿನ್ನೀರಿನಲ್ಲಿ ಎಸೆದು ಏನೂ ಅರಿಯದವನಂತೆ ನಾಟಕವಾಡಿದ್ದಾನೆ.

ನವೆಂಬರ್ 15ರಂದು ಹಿನ್ನೀರಿನಲ್ಲಿ ಅಜ್ಜಿಯ ಶವ ಪತ್ತೆಯಾದ ಬೆನ್ನಲ್ಲೇ ಯಮಕನಮರಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮೊಮ್ಮಗನನ್ನು ಬಂಧಿಸಿದಾಗ ಈ ಭೀಕರ ಸತ್ಯ ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದಲೂ ಆರೋಪಿ ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಗೆ ಪೀಡಿಸುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಕೊಲೆ ಮಾಡಿದ ಮೊಮ್ಮಗ ಹಾಗೂ ಆತನ ರಕ್ಷಣೆಗೆ ನಿಂತಿದ್ದ ತಂದೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಎಸ್ಪಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

Tags:

error: Content is protected !!