Belagavi

2 ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾನವೀಯತೆ ಮೆರೆದ ಮಾಜಿ ಮೇಯರ್ ವಿಜಯ್ ಮೋರೆ ತಂಡ…

Share

 

ಬದುಕಿದ್ದಾಗ ಜೊತೆಗಿದ್ದವರು ಕೊನೆಯ ಪಯಣದಲ್ಲಿ ಇಲ್ಲದಿದ್ದರೂ, ಮಾನವೀಯತೆ ಮಾತ್ರ ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ಬೆಳಗಾವಿಯಲ್ಲಿ ಸಾಕ್ಷಿಯೊಂದು ಸಿಕ್ಕಿದೆ. ವಾರಸುದಾರರಿಲ್ಲದೆ ಮೃತಪಟ್ಟ ಇಬ್ಬರು ಅನಾಥರಿಗೆ ಮಾಜಿ ಮೇಯರ್ ವಿಜಯ್ ಮೋರೆ ಹಾಗೂ ಅವರ ತಂಡ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಬಳಿ ಆಶ್ರಯ ಪಡೆದಿದ್ದ ಅನಾಮಧೇಯ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು. ಇವರಿಗೆ ಯಾರೂ ವಾರಸುದಾರರಿಲ್ಲದ ಕಾರಣ ಮಾರ್ಕೆಟ್ ಠಾಣೆ ಪೊಲೀಸರು ಮಾಜಿ ಮೇಯರ್ ವಿಜಯ್ ಮೋರೆ ಅವರನ್ನು ಸಂಪರ್ಕಿಸಿದ್ದರು. ಮತ್ತೊಂದೆಡೆ, ಮಚ್ಛೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು ಸಹ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದರು. ಇವರಿಗೂ ಕುಟುಂಬಸ್ಥರಿಲ್ಲದ ಕಾರಣ ಕೇಂದ್ರದ ಸಿಬ್ಬಂದಿ ವಿಜಯ್ ಮೋರೆ ಹಾಗೂ ಅವಧೂತ ತುಡವೇಕರ್ ಅವರ ನೆರವು ಕೋರಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ವಿಜಯ್ ಮೋರೆ ನೇತೃತ್ವದ ತಂಡ, ಬೆಳಗಾವಿಯ ಸದಾಶಿವ ನಗರ ಸ್ಮಶಾನದಲ್ಲಿ ಇಬ್ಬರಿಗೂ ವಿಧಿವಿಧಾನಗಳೊಂದಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದೆ. ಬೈಟ್
ಈ ಸಂದರ್ಭದಲ್ಲಿ ಅಲನ್ ವಿಜಯ್ ಮೋರೆ, ಅವಧೂತ ತುಡವೇಕರ್, ಪದ್ಮಪ್ರಸಾದ್ ಹೂಲಿ, ಪ್ರಕಾಶ್ ಮುಚಂಡಿಕರ್, ನಿಸಾರ್ ಶಂಶೇರ್, ಸಂಜಯ್ ಮೇತ್ರಿ, ಸ್ಮಶಾನದ ಸಿಬ್ಬಂದಿ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸ್ ಸಿಬ್ಬಂದಿ ಸುಜಾತಾ ಉಪಸ್ಥಿತರಿದ್ದರು. ಹುಟ್ಟಿದಾಗ ಯಾರೇ ಇದ್ದರೂ, ಸಾವಿನ ನಂತರ ಅನಾಥರಾಗಿದ್ದ ಜೀವಗಳಿಗೆ ಹೆಗಲು ಕೊಡುವ ಮೂಲಕ ಈ ತಂಡ ಸಮಾಜಕ್ಕೆ ಮಾದರಿಯಾಗಿದೆ.

Tags:

error: Content is protected !!