ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನ ‘ಈ-ಖಾತಾ’ ವ್ಯವಸ್ಥೆ ಅನುಷ್ಠಾನದಲ್ಲಿ ತೀವ್ರ ವಿಳಂಬವಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಅನಗತ್ಯ ದಾಖಲೆಗಳ ಬೇಡಿಕೆ ಹಾಗೂ ಬಿ-ಖಾತಾ ಗೊಂದಲಗಳ ವಿರುದ್ಧ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್, ಇತರೆ ಜಿಲ್ಲೆಗಳಲ್ಲಿ ‘ಈ-ಖಾತಾ’ ವ್ಯವಸ್ಥೆ ಉತ್ತಮ ಪ್ರಗತಿ ಕಾಣುತ್ತಿದ್ದರೂ, ಬೆಳಗಾವಿ ಪಾಲಿಕೆಯಲ್ಲಿ ಮಾತ್ರ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಖಾತೆ ನೋಂದಣಿಗಾಗಿ ಅನಗತ್ಯ ಹಾಗೂ ಹಳೆಯ ಕಾಲದ ಕಾಗದಪತ್ರಗಳನ್ನು ಕೇಳುತ್ತಿರುವುದರಿಂದ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಯಾವ ಆಸ್ತಿಗೆ ಸಿಟಿಎಸ್ (CTS) ಹಾಗೂ ಪಿಐಡಿ (PID) ನಂಬರ್ ಇರುತ್ತದೆಯೋ ಅವರಿಗೆ ಯಾವುದೇ ವಿಳಂಬವಿಲ್ಲದೆ 2-3 ದಿನಗಳಲ್ಲಿ ಈ-ಖಾತಾ ನೀಡಬೇಕು ಮತ್ತು ಬೆಂಗಳೂರಿನಂತೆ ಬೆಳಗಾವಿಯಲ್ಲೂ ವಾರ್ಡ್ವಾರು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ವೈಭವ ನಗರ ಹಾಗೂ ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಗಳ ಬಿ-ಖಾತಾ ಆಸ್ತಿಗಳ ಕುರಿತು ಪಾಲಿಕೆಯಲ್ಲಿ ಸ್ಪಷ್ಟ ನಿಯಮಗಳಿಲ್ಲದೆ, ಕೆಳಮಟ್ಟದ ಸಿಬ್ಬಂದಿ ಸಾರ್ವಜನಿಕರಿಂದ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸ್ಥಳೀಯ ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ತಪ್ಪಿದಲ್ಲಿ ಮುಂದಿನ ವಾರದಿಂದ ಸಾರ್ವಜನಿಕರನ್ನು ಒಟ್ಟುಗೂಡಿಸಿ ರಸ್ತೆಗಿಳಿದು ಪಾದಯಾತ್ರೆ ಹಾಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಆಪ್ ಕಾರ್ಯಕರ್ತರು ಭಾಗಿಯಾಗಿದ್ಧರು.
