BELAGAVI

ಅನುಮತಿ ಸಿಗದಿದ್ದರೂ ಮಹಾಮೇಳಾವಾ ನಡೆಸಲು ಎಂಇಎಸ್ ದೃಢ ನಿರ್ಧಾರ

Share

ಗಡಿ ವಿವಾದದ ಹೋರಾಟಕ್ಕೆ ಹೊಸ ದಿಕ್ಕು ನೀಡಲು ಮತ್ತು ಮರಾಠಿ ಭಾಷಿಕರ ಒಗ್ಗಟ್ಟು ಪ್ರದರ್ಶಿಸಲು, ಆಡಳಿತದಿಂದ ಅನುಮತಿ ಸಿಗದಿದ್ದರೂ ‘ಮಹಾಮೇಳಾವಾ’ ಆಯೋಜಿಸಿಯೇ ತೀರುವುದಾಗಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ದೃಢ ನಿರ್ಧಾರ ಕೈಗೊಂಡಿದೆ. ಸಭೆಯಲ್ಲಿ ಗನಿಮಿಕಾವಾ ರಣತಂತ್ರದ ಮೂಲಕ ಹೋರಾಟ ನಡೆಸುವ ಮತ್ತು ಕನಿಷ್ಠ 50 ಕಾರ್ಯಕರ್ತರು ಬಂಧನಕ್ಕೆ ಸಿದ್ಧರಾಗುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಪ್ರಕಾಶ್ ಮರಗಾಳೆ, ಗಡಿ ವಿವಾದದ ಕಾನೂನು ಹೋರಾಟ ಹಾಗೂ ಮುಂದಿನ ತಿಂಗಳ ಮೊದಲ ವಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ನಡೆಯಲಿರುವ ಸಭೆಯ ಕುರಿತು ಮಾಹಿತಿ ನೀಡಿದರು. ಗಡಿ ಹೋರಾಟದಲ್ಲಿ ಮಹಾರಾಷ್ಟ್ರ ನಾಯಕರ ನಿರಾಸಕ್ತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಯುವಕರು ನಡೆಸಿದ ರ್ಯಾ ಲಿ ಸಮಿತಿಗೆ ಹೊಸ ಚೈತನ್ಯ ನೀಡಿದೆ ಎಂದರು. ಅಲ್ಲದೆ, ಶಿವಾಜಿರಾವ್ ಪಾಟೀಲ್ ಅವರ ಪತ್ರವನ್ನು ಸಿಎಂ ಮುಂದಿಡುವುದಾಗಿ ತಿಳಿಸಿದ ಅವರು, ಪುಣೆ ಸಮಿತಿ ಹಾಗೂ ವಿಜಯ್ ದೇವಣೆ ಅವರ ಕಾರ್ಯವನ್ನು ಶ್ಲಾಘಿಸಿದರು.

ಮಾಜಿ ಮೇಯರ್ ಹಾಗೂ ತಾಲೂಕು ಎಂಇಎಸ್ ಅಧ್ಯಕ್ಷ ಮನೋಹರ್ ಕಿಣೇಕರ್ ಮಾತನಾಡಿ, ಮಹಾಮೇಳಾವಾ ಆಯೋಜನೆಗೆ 5 ಅಥವಾ 6 ಜನರ ಸಮಿತಿ ರಚಿಸಿ, ಅನುಮತಿ ನಿರಾಕರಿಸಿದರೆ ಗನಿಮಿಕಾವಾ ರಣ ತಂತ್ರದ ಮೂಲಕ ಹೋರಾಟ ನಡೆಸಬೇಕು ಹಾಗೂ 50 ಕಾರ್ಯಕರ್ತರು ಬಂಧನಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು. ಬಂಧಿತ ಕಾರ್ಯಕರ್ತರ ಬೆನ್ನಿಗೆ ಸಮಿತಿ ನಿಲ್ಲಲಿದ್ದು, 1ನೇ ತಾರೀಖು ಸಂಜೆ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಆಬಾಸಾಹೇಬ್ ದಳವಿ ಮಾತನಾಡಿ, ಅನುಮತಿ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಸಲಹೆ ನೀಡಿದರೆ, ಎಂ.ಜಿ. ಪಾಟೀಲ್ ಅವರು ಸರ್ದಾರ್ ಮೈದಾನ, ಧರ್ಮವೀರ ಛತ್ರಪತಿ ಸಂಭಾಜೀ ಮಹಾರಾಜ್ ಚೌಕ ಮತ್ತು ಸಂಭಾಜಿ ಉದ್ಯಾನವನದಲ್ಲಿ ಅನುಮತಿ ಕೇಳಲಾಗಿದ್ದು, ಪ್ರತಿಯೊಬ್ಬರೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಸಭೆಯಲ್ಲಿ ರಾಜಾರಾಮ್ ದೇಸಾಯಿ, ಅನಿಲ್ ಪಾಟೀಲ್ ಮತ್ತು ಡಿ.ಬಿ. ಪಾಟೀಲ್ ಅವರು ಮಹಾಮೇಳಾವಾ ನಡೆಯಲೇಬೇಕು ಎಂದು ಒತ್ತಾಯಿಸಿದ್ದು, ನಾಯಕರ ನಡುವಿನ ಶ್ರೇಯಸ್ಸಿನ ಜಗಳ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಿದರು. ಈ ಮಹತ್ವದ ಸಭೆಯಲ್ಲಿ ನಗರ ಎಂಇಎಸ್ ಅಧ್ಯಕ್ಷ ರಂಜಿತ್ ಚವ್ಹಾಣ್-ಪಾಟೀಲ್, ಮಾಜಿ ಮೇಯರ್ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲೋಜಿರಾವ್ ಅಷ್ಟೇಕರ್ ಮತ್ತು ನಾಯಕ ಆರ್.ಎಂ. ಚೌಗುಲೆ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!