Raibag

ನೀವೇಕೆ ಚಿಂತೆ ಮಾಡ್ತೀರಿ, ಸರ್ಕಾರ ನೋಡಿಕೊಳ್ಳುತ್ತದೆ, ಅದು ನಿಮ್ಮ ಡ್ಯೂಟಿಯಲ್ಲ

Share

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದ್ದು, ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಹಾಗೂ ನಿರ್ವಹಣೆ ಅನುದಾನದ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಗರಂ ಆಗಿದ್ದಾರೆ. ವಿದ್ಯುತ್ ಕಡಿತವಾಗುತ್ತೆ ಅಂತ ನೀವೇಕೆ ಚಿಂತೆ ಮಾಡ್ತೀರಿ, ಸರ್ಕಾರ ನೋಡಿಕೊಳ್ಳುತ್ತೆ ಅಂತ ಮಾಧ್ಯಮದವರ ಪ್ರಶ್ನೆಗೆ ಸಚಿವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ರಾಯಬಾಗ ಕುಡಚಿಯಲ್ಲಿ ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿ ಹಾಗೂ ನಿರ್ವಹಣೆ ಅನುದಾನಕ್ಕೆ ಬ್ರೇಕ್ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಸರ್ಕಾರ ಇದೆ, ಎಲ್ಲವೂ ಆಗುತ್ತೆ, ಅದ್ಯಾಕೆ ನಿಮಗೆ ಚಿಂತೆ?” ಎಂದು ಮಾಧ್ಯಮದವರ ಮೇಲೆ ಗರಂ ಆದರು. “ಅದು 20 ಕೋಟಿ ಆಗಲಿ, 30 ಕೋಟಿ ಆಗಲಿ, ಇದು ಸರ್ಕಾರದ ಜವಾಬ್ದಾರಿ. ಬಿಲ್ ಸಬ್ಮಿಟ್ ಆದ ಮೇಲೆ ಹಣ ಬಿಡುಗಡೆಯಾಗುವುದು ಸ್ವಲ್ಪ ತಡವಾಗಬಹುದು. ಅದನ್ನು ನೋಡಿಕೊಳ್ಳಲು ಅಧಿಕಾರಿಗಳಿದ್ದಾರೆ, ಸರ್ಕಾರ ನೋಡಿಕೊಳ್ಳುತ್ತದೆ, ಅದು ನಿಮ್ಮ ಡ್ಯೂಟಿಯಲ್ಲ” ಎಂದು ಸಚಿವರು ಖಡಕ್ ಆಗಿ ಉತ್ತರಿಸಿದರು.

ಇನ್ನು ಸುವರ್ಣಸೌಧದ ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಸುಮಾರು 11 ಲಕ್ಷ ರೂ. ಬಾಕಿ ಉಳಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೇವಲ 11 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆಯಾಗಿದೆ. ಇನ್ನೊಂದೆಡೆ, ಸುವರ್ಣಸೌಧದ ನಿರ್ವಹಣೆಗೆ ಅಗತ್ಯವಿರುವ 2.20 ಕೋಟಿ ರೂ. ಅನುದಾನದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ತಡೆ ನೀಡಿದೆ ಎನ್ನಲಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅನುದಾನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Tags:

error: Content is protected !!