Kagawad

ಉಗಾರ ಲಯನ್ಸ್ ಕ್ಲಬ್‌ನಿಂದ 200 ಜನರಿಗೆ ಉಚಿತ HbA1c ಮಧುಮೇಹ ತಪಾಸಣೆ ಶಿಬಿರ

Share

ಮಧುಮೇಹದಿಂದ ಬಳಲುತ್ತಿರುವವರ ಆರೋಗ್ಯದ ದೃಷ್ಟಿಯಿಂದ ಉಗಾರ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 200 ಜನರಿಗೆ ತಲಾ ₹500 ವೆಚ್ಚದ HbA1c ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಿಸುವ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಗೆ ಸ್ಪಂದಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ಮೋಹನ ಕಟಗೇರಿ ಹೇಳಿದರು.

ಶನಿವಾರ ಉಗಾರದ ಡಾ. ಶಿರಗಾಂವ್ಕರ್ ಅವರ ವಿಹಾರ ಸಭಾಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಉಚಿತ ಮಧುಮೇಹ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಮಧುಮೇಹದಿಂದ ಬಳಲುತ್ತಿರುವ ಪ್ರತಿಯೊಬ್ಬರೂ ಕಾಲಕಾಲಕ್ಕೆ HbA1c ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಈ ಪರೀಕ್ಷೆಯು ಕಳೆದ 2ರಿಂದ 3 ತಿಂಗಳ ಅವಧಿಯಲ್ಲಿ ರಕ್ತದಲ್ಲಿನ ಸರಾಸರಿ ಸಕ್ಕರೆ ಮಟ್ಟ ಎಷ್ಟಿತ್ತು ಎಂಬುದನ್ನು ತಿಳಿಸುತ್ತದೆ. ಮಧುಮೇಹ ಪತ್ತೆಹಚ್ಚಲು ಹಾಗೂ ಈಗಾಗಲೇ ಮಧುಮೇಹ ಹೊಂದಿರುವವರಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಪರೀಕ್ಷೆ ಸಹಕಾರಿಯಾಗಿದೆ ಎಂದು ವಿವರಿಸಿದರು.

HbA1c ಪರೀಕ್ಷೆಯ ವರದಿಯಲ್ಲಿ ಶೇ. 5.7ಕ್ಕಿಂತ ಕಡಿಮೆ ಇದ್ದರೆ ಸಾಮಾನ್ಯ ಸಕ್ಕರೆ ಮಟ್ಟವೆಂದು ಪರಿಗಣಿಸಲಾಗುತ್ತದೆ. ಶೇ. 5.7ರಿಂದ 6.4ರ ನಡುವೆ ಇದ್ದರೆ ಮಧುಮೇಹದ ಪೂರ್ವ ಹಂತವೆಂದು ಹಾಗೂ ಶೇ. 6.5 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಧುಮೇಹದ ಸೂಚನೆಯೆಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿಗೆ ಶೇ. 6.5 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣ ಕಂಡುಬಂದರೆ ವೈದ್ಯರ ಸಲಹೆಯಂತೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿ ದೃಢಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಪರೀಕ್ಷೆಯಿಂದ ಕಳೆದ 2ರಿಂದ 3 ತಿಂಗಳ ಸರಾಸರಿ ಸಕ್ಕರೆ ಮಟ್ಟ, ಮಧುಮೇಹ ನಿಯಂತ್ರಣದ ಸ್ಥಿತಿ ಹಾಗೂ ಔಷಧಿ ಮತ್ತು ಜೀವನಶೈಲಿಯ ಬದಲಾವಣೆಗಳ ಪರಿಣಾಮವನ್ನು ತಿಳಿದುಕೊಳ್ಳಬಹುದು. ಮಧುಮೇಹ ಹೊಂದಿರುವ ಬಹುತೇಕ ವಯಸ್ಕರಿಗೆ HbA1c ಪ್ರಮಾಣವನ್ನು ಶೇ. 7ಕ್ಕಿಂತ ಕಡಿಮೆ ಇಟ್ಟುಕೊಳ್ಳುವುದು ಸಾಮಾನ್ಯ ಗುರಿಯಾಗಿದೆ. ಆದರೆ ವ್ಯಕ್ತಿಯ ವಯಸ್ಸು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಗುರಿಯನ್ನು ನಿರ್ಧರಿಸುತ್ತಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಧುಮೇಹ ನಿಯಂತ್ರಣಕ್ಕೆ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಾಗವಾಡ ತಾಲೂಕು ಆಯುಷ್ ವೈದ್ಯರ ಸಂಘದ ಕಾರ್ಯದರ್ಶಿ ಡಾ. ಸುರೇಶ ಕುಂದರಗಿ, ಉಗಾರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಆನಂದ ಕುಂಬಾರ, ಖಜಾಂಚಿ ಪ್ರಾಚಾರ್ಯ ಪಿ.ಬಿ. ಕುಲಕರ್ಣಿ, ಸದಸ್ಯರಾದ ಸಚಿನ್ ಪೋತದಾರ, ಮನೋಜ ಮಾಲಗತ್ತೆ, ಮಹಾದೇವ ದಾನನ್ನವರ, ತಪಾಸಣಾ ಕೇಂದ್ರದ ಪ್ರಮುಖ ಉಮೇಶ ಕಲ್ಲೋಳಿ, ಬಿಜೆಪಿ ಪಕ್ಷದ ಹಿರಿಯ ನಾಯಕ ಆನಂದ ಸದಲಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಕುಮಾರ ಬನ್ನುರೆ, ಇನ ನ್ಯೂಸ್, ಕಾಗವಾಡ

Tags:

error: Content is protected !!