Kagawad

ಉಗಾರದಲ್ಲಿ ಶಿರುಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಜನರಲ್ ಮ್ಯಾನೇಜರ್‌ಗೆ ರೈತರಿಂದ ಸನ್ಮಾನ

Share

ಕಬ್ಬು ಬೆಳೆಗಾರ ರೈತರಿಗೆ ಪ್ರಸಕ್ತ 2026-27ನೇ ಸಾಲಿನ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ₹4,000 ದರ ನೀಡುವುದಾಗಿ ಘೋಷಿಸಿದ ಶಿರುಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನವರ್ ಮತ್ತು ಜನರಲ್ ಮ್ಯಾನೇಜರ್ ಅರುಣ್ ಪರಾಂಡೆ ಅವರನ್ನು ಉಗಾರ ಬುದ್ರುಕ್ ಗ್ರಾಮದ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ಶೀತಲ್ ಪಾಟೀಲ ಹಾಗೂ ರೈತರು ಸನ್ಮಾನಿಸಿ ಅಭಿನಂದಿಸಿದರು.

ಬುಧವಾರ ಸಂಜೆ ಉಗಾರ ಬುದ್ರುಕ್ ಗ್ರಾಮದ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ಶೀತಲ್ ಪಾಟೀಲ ಅವರ ನೇತೃತ್ವದಲ್ಲಿ ಸಂಸ್ಥೆಯ ಎಲ್ಲ ನಿರ್ದೇಶಕರು ಹಾಗೂ ರೈತರು ಒಂದಾಗಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಮತ್ತು ಜನರಲ್ ಮ್ಯಾನೇಜರ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶೀತಲ್ ಪಾಟೀಲ, ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಗೆ ಹೆಚ್ಚಿನ ದರ ಕೊಡಿಸುವ ಉದ್ದೇಶದಿಂದ ಹಸಿರುಸೇನೆ ರೈತ ಸಂಘಟನೆಯ ಅಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರು ಲಕ್ಷಾಂತರ ರೈತರನ್ನು ಒಗ್ಗೂಡಿಸಿ ಹೋರಾಟ ನಡೆಸಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳಲಿಲ್ಲ. ಈ ಮಧ್ಯೆ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡುವ ಘೋಷಣೆ ಮಾಡಲಾಗಿತ್ತು.

ಕಷ್ಟಪಟ್ಟು ಕಬ್ಬು ಬೆಳೆದ ರೈತರಿಗೆ ಈ ದರ ನ್ಯಾಯಯುತವಲ್ಲ ಎಂಬುದನ್ನು ಅರಿತುಕೊಂಡ ಶಿರುಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣ ಮಗ್ಗೆನವರ್ ಅವರು ಪ್ರತಿ ಟನ್ ಕಬ್ಬಿಗೆ ₹4,000 ದರ ನೀಡುವುದಾಗಿ ಘೋಷಿಸಿರುವುದು ಎಲ್ಲರಿಗೂ ಆಶ್ಚರ್ಯ ಹಾಗೂ ಸಂತಸ ತಂದಿದೆ. ಇದರಿಂದ ಇತರ ಕಾರ್ಖಾನೆಗಳೂ ದರ ಹೆಚ್ಚಿಸಲು ಮುಂದಾಗಿವೆ. ಈ ನಿರ್ಧಾರದ ಸಂಪೂರ್ಣ ಶ್ರೇಯಸ್ಸು ಕಲ್ಲಪ್ಪಣ್ಣ ಮಗ್ಗೆನವರ್ ಅವರಿಗೆ ಸಲ್ಲುತ್ತದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು ರೈತಪರ ವ್ಯಕ್ತಿಯಾಗಿದ್ದಾರೆ ಎಂದು ಪ್ರಶಂಸಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲ್ಲಪ್ಪಣ್ಣ ಮಗ್ಗೆನವರ್, ಕಳೆದ 15 ವರ್ಷಗಳಿಂದ ಸಕ್ಕರೆ ಕಾರ್ಖಾನೆಯನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿವರ್ಷ ಇತರ ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರವನ್ನು ರೈತರಿಗೆ ನೀಡುತ್ತಾ ಬಂದಿದ್ದೇವೆ. ಪ್ರಸಕ್ತ ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಪ್ರತಿ ಟನ್ ಕಬ್ಬಿಗೆ ₹4,000 ದರ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಕ್ಕರೆಯ ದರ ಹೆಚ್ಚಾದರೆ ಕಬ್ಬಿನ ದರದಲ್ಲಿಯೂ ಮತ್ತಷ್ಟು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ ತಮ್ಮನ್ನು ಸನ್ಮಾನಿಸಿದ ರೈತರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಖಾನೆಯ ಜನರಲ್ ಮ್ಯಾನೇಜರ್ ಅರುಣ್ ಪರಾಂಡೆ ಅವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಕೆಪಿಎಸ್ ಸಂಸ್ಥೆಯ ಉಪಾಧ್ಯಕ್ಷ ಪದ್ಮಕುಮಾರ್ ಆಳಪ್ಪನವರ್, ಪದ್ಮಜಿತ್ ಪಾಟೀಲ, ಅಮೀನ್ ಶೇಖ್ ಸೇರಿದಂತೆ ಇತರ ರೈತ ಮುಖಂಡರು ಮಾತನಾಡಿದರು.

ಸಮಾರಂಭದಲ್ಲಿ ಪಿಕೆಪಿಎಸ್ ಸದಸ್ಯರಾದ ಸುರೇಶ್ ಕುಸನಾಳೆ, ಅನ್ನಸಾಹೇಬ್ ವಾಂಗಿರೆ, ಕಲ್ಲಪ್ಪ ತೇರ್ದಾಳೆ, ಅಜಿತ್ ಹೊಸುರೆ, ಅಭಿಷೇಕ್ ಚೌಗುಲೆ, ಕೋಮಲ್ ಚೌಗುಲೆ, ಜೈಪಾಲ್ ಎರಂಡೊಲೆ, ಮನೋಜ್ ಕುಸನಹಳ್ಳೆ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಸುಕುಮಾರ್ ಬನ್ನೂರೆ*
ಇನ ನ್ಯೂಸ್ಸ ಕಾಗವಾಡ

Tags:

error: Content is protected !!