ಸುಕ್ಷೇತ್ರ ಸವದತ್ತಿಯ ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರ ಸಮಿತಿಯ ನಿರ್ದೇಶಕರಾಗಿ ಕಾಗವಾಡದ ಸುಪುತ್ರ ಜ್ಯೋತಿಕುಮಾರ್ ಪಾಟೀಲ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ನಾಮನಿರ್ದೇಶನ ಮಾಡಿರುವುದು ಕಾಗವಾಡ ಮತಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿ ಎಂದು ಶಿವಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಬಿ.ಜೆ. ಪಾಟೀಲ್ ಹೇಳಿದರು.

ಶುಕ್ರವಾರ ಸಂಜೆ ಕಾಗವಾಡದ ಶ್ರೀ ಮಲ್ಲಿಕಾರ್ಜುನ ಸಂಸ್ಥೆಯ ಸಭಾಭವನದಲ್ಲಿ ಕಾಗವಾಡ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನೂತನವಾಗಿ ಆಯ್ಕೆಗೊಂಡ ಜ್ಯೋತಿಕುಮಾರ್ ಪಾಟೀಲ್ ಅವರನ್ನು ಸನ್ಮಾನಿಸಿ ಅಭಿನಂದಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಬಿ.ಜೆ. ಪಾಟೀಲ್ ಮಾತನಾಡಿದರು.
ಕಾಗವಾಡ ಗ್ರಾಮದ ಗೌಡರಾದ ದಿವಂಗತ ಸಿದ್ದಗೌಡ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ನಿರಂತರವಾಗಿ ಪಕ್ಷದ ಸೇವೆಯೊಂದಿಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಬಳಿಕ ಅವರ ಸುಪುತ್ರ ಜ್ಯೋತಿಕುಮಾರ್ ಪಾಟೀಲ್ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಪಿಕೆಪಿಎಸ್ ಅಧ್ಯಕ್ಷರಾಗಿ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿರಿಯ ಸಚಿವರು ಹಾಗೂ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರ ಆದೇಶದ ಮೇರೆಗೆ ಈ ಸೇವೆಯ ಅವಕಾಶ ಒದಗಿ ಬಂದಿದೆ ಎಂದರು.

ಕಾಗವಾಡ ಪಟ್ಟಣದಿಂದ 1955 ರಿಂದ ಈವರೆಗೆ ಶಾಸಕರು ಆಯ್ಕೆಗೊಂಡಿಲ್ಲ. ಇದರ ಶ್ರೇಯಸ್ಸು ಮುಂದೆ ಜ್ಯೋತಿಕುಮಾರ್ ಪಾಟೀಲ್ ಅವರಿಗೆ ಸಲ್ಲಲಿ ಎಂದು ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಜ್ಯೋತಿಕುಮಾರ್ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ನನಗೆ ನೀಡಿರುವ ಈ ಅವಕಾಶದ ಸದುಪಯೋಗ ಮಾಡಿಕೊಳ್ಳುತ್ತೇನೆ. ಕುಂದುಕೊರತೆಗಳ ಬಗ್ಗೆ ಸಲಹೆ ನೀಡಿರಿ ಎಂದು ಹೇಳಿ, ಕಾಗವಾಡ ಪಟ್ಟಣದ ಎಲ್ಲ ಸಂಘ-ಸಂಸ್ಥೆಗಳು ಒಂದುಗೂಡಿ ಸನ್ಮಾನಿಸುತ್ತಿರುವುದು ನನ್ನ ಭಾಗ್ಯ ಎಂದರು.
ಸಮಾರಂಭದಲ್ಲಿ ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎ. ಪಾಟೀಲ್, ಮಲ್ಲಿಕಾರ್ಜುನ ಸಂಸ್ಥೆಯ ಅಧ್ಯಕ್ಷ ಕಲಗೌಡ ಪಾಟೀಲ್, ಅಕ್ಕಮಹಾದೇವಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರಾಣಿ ಪಾಟೀಲ್, ಕಾರ್ಯದರ್ಶಿ ಸಾಧನಾ ಲಿಂಗನೂರ, ವೀರಶೈವ ಸಂಸ್ಥೆಯ ಪದಾಧಿಕಾರಿಗಳು, ಶಿವಾನಂದ ಅವಟಿ, ಕೃಷ್ಣಾ ಪಾಟೀಲ್, ನ್ಯಾಯವಾದಿ ಕಾಕಾ ಪಾಟೀಲ್, ಬಾಳಗೌಡ ಪಾಟೀಲ್, ಬಾಬು ಚೌಗುಲೆ, ಕಾಶಿಮ್ ಮುಲ್ಲಾ, ಶೇಖರ್ ಪಾಟೀಲ್, ಜೆ.ಕೆ. ಪಾಟೀಲ್, ಚಿದಾನಂದ ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
