ಜಮೀನು ಲೀಸ್ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ ಸುಮಾರು 10 ಎಕರೆ ಜಮೀನನ್ನು ಅದೇ ಗ್ರಾಮದ ಸಾಲೋಟಗಿ ಕುಟುಂಬದವರು ಲೀಸ್ ಪಡೆದು ಕಬ್ಬು ಬೆಳೆದಿದ್ದರು. ಈ ಜಮೀನಿನಲ್ಲಿ ತಮ್ಮ ಪಾಲಿದೆ ಎಂದು ಹನುಮವ್ವ ಅವರ ಸಂಬಂಧಿಕರು ತಕರಾರು ತೆಗೆದಿದ್ದರು ಎನ್ನಲಾಗಿದೆ.
ಈ ಬಾರಿ ಕಬ್ಬು ಬೆಳೆದಿರುವುದರಿಂದ ಕಟಾವು ಮಾಡಿಕೊಂಡು ಹೋಗುತ್ತೇವೆ, ಮುಂದಿನ ವರ್ಷದಿಂದ ಜಮೀನು ಲೀಸ್ ಪಡೆಯುವುದಿಲ್ಲ ಎಂದು ಸಾಲೋಟಗಿ ಕುಟುಂಬದವರು ಹೇಳಿದ್ದರೂ, ಇದಕ್ಕೆ ಹನುಮವ್ವ ಅವರ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇಂದು ಸಾಲೋಟಗಿ ಕುಟುಂಬದವರು ಜಮೀನಿಗೆ ಕಬ್ಬು ಕಟಾವು ಮಾಡಲು ತೆರಳಿದ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡೂ ಗುಂಪಿನವರು ಕಲ್ಲು, ಕಟ್ಟಿಗೆ ಹಾಗೂ ಬಡಿಗೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಸಾಲೋಟಗಿ ಕುಟುಂಬದ ಹನುಮಂತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜಮೀನು ವಿವಾದವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
