Vijaypura

ಕೇಂದ್ರ ನೋಂದಣಾಧಿಕಾರಿಗಳ ನೋಟಿಸ್ ಚರ್ಚೆಗೆ ಗ್ರಾಸ; ಸಿದ್ಧಸಿರಿ ಸಂಸ್ಥೆಯಿಂದ ಸ್ಪಷ್ಟನೆ

Share

ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಇದೀಗ ಸಹಕಾರಿ ವಲಯದಲ್ಲಿ ಚರ್ಚೆ ಶುರುವಾಗಿದೆ. ಸಿದ್ಧಸಿರಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಹಕಾರ ಸಚಿವಾಲಯದ ಅಧೀನದ ಕೇಂದ್ರ ನೋಂದಣಾಧಿ ಕಾರಿಗಳ ಕಚೇರಿ ಸ್ಪಷ್ಟನೆ ಕೇಳಿದೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಬಹು-ರಾಜ್ಯ ಸಹಕಾರಿ ಸಂಘವಾಗಿ ಮೇಲ್ದರ್ಜೆಗೇರಿರುವ ಸಿದ್ಧಸಿರಿ ಸಂಸ್ಥೆಯ ಹಣಕಾಸು ವರದಿಗಳ ಪರಿಶೀಲನೆ ವೇಳೆ 11 ಪ್ರಮುಖ ಅಂಶಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಮಾಹಿತಿ ಮುನ್ನೆಲೆಗೆ ಬಂದಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿ ದಂತೆ ಸಂಸ್ಥೆಯ ಕಾನೂನು ಸಲಹೆಗಾರ ಸ್ಪಷ್ಟನೆ ನೀಡಿದ್ದಾರೆ, ಹಾಗಾದರೆ ಕೇಂದ್ರ ನೋಂದಣಾಧಿ ಕಾರಿಗಳ ನೋಟಿಸ್‌ನಲ್ಲಿರುವ ವಿಚಾರ ಗಳೇನು? ಸಂಸ್ಥೆಯ ಸ್ಪಷ್ಟನೆ ಏನು? ಈ ಸಂಪೂರ್ಣ ಪ್ರಕರಣದ ವಿವರ ಇಲ್ಲಿದೆ ನೋಡಿ.

ಸಹಕಾರಿ ಸಂಸ್ಥೆಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಇದೀಗ ಚರ್ಚೆ ಮುನ್ನೆಲೆಗೆ ಬಂದಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಧ್ಯಕ್ಷ ರಾಗಿರುವ ಹಾಗೂ ಅವರ ಪುತ್ರ ರಾಮನಗೌಡ ಪಾಟೀಲ ಚೇರ್ಮನ್ ಆಗಿರುವ ಈ ಸಂಸ್ಥೆಯ ಹಣಕಾಸು ವರದಿಗಳ ಪರಿಶೀಲನೆ ನಡೆಸಿರುವ ಕೇಂದ್ರ ನೋಂದಣಾಧಿ ಕಾರಿಗಳ ಕಚೇರಿ, 11 ಪ್ರಮುಖ ಅಂಶಗಳ ಕುರಿತು ವಿವರಣೆ ಕೇಳಿದೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿಂಚೋಳಿ ಶುಗರ್ಸ್ ಮತ್ತು ಬಯೋ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ ವ್ಯವಹಾರಗಳು, ಹೂಡಿಕೆ ಹಾಗೂ ಆಸ್ತಿ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯು ತ್ತಿದೆ. ಸದ್ಯ ಯತ್ನಾಳ ವಿರೋಧಿಗಳು ಇದನ್ನು ಷೇರ್ ಮಾಡಿ ಚರ್ಚಗೆ ಇಳಿದಿದ್ದಾರೆ. ಇತ್ತ ಯತ್ನಾಳ ಬೆಂಬಲಿಗರು ಕೂಡಾ ತಿರುಗೇಟು ನೀಡುತ್ತಿದ್ದಾರೆ.

ಇನ್ನೂ ಕೇಂದ್ರ ನೋಂದಣಾಧಿಕಾರಿಗಳ ಕಚೇರಿಯಿಂದ ಬಂದಿದ್ದ ನೋಟಿಸ್‌ಗೆ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿಯೇ ಲಿಖಿತ ಉತ್ತರ ನೀಡಿದೆ. ನಂತರ ಅಧಿಕಾರಿಗಳು ಕೆಲವು ಅಂಶಗಳ ಕುರಿತು ವೈಯಕ್ತಿಕವಾಗಿ ಸ್ಪಷ್ಟನೆ ಕೇಳಿದ್ದು, ಸಂಸ್ಥೆಯ ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಆಂತರಿಕ ಲೆಕ್ಕಪರಿಶೋಧಕರು ಖುದ್ದಾಗಿ ಹಾಜರಾಗಿ ವಿವರಣೆ ನೀಡಿದ್ದಾರೆ. ಆ ಬಳಿಕ ಯಾವುದೇ ಹೊಸ ಸ್ಪಷ್ಟನೆ ಕೇಳಿಲ್ಲ ಎಂದು ಸತೀಶ್ ಚಂದ್ರ ಕುಲಕರ್ಣಿ ತಿಳಿಸಿದ್ದಾರೆ. ಇನ್ನು ಚಿಂಚೋಳಿ ಶುಗರ್ಸ್‌ನಲ್ಲಿ ಸಿದ್ಧಸಿರಿ ಹೂಡಿಕೆ ಮಾಡಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಚಿಂಚೋಳಿ ಶುಗರ್ಸ್ ಮತ್ತು ಚಿಂಚೋಳಿ ಬಯೋ ಇಂಡಸ್ಟ್ರೀಸ್ ಎರಡು ಪ್ರತ್ಯೇಕ ಸಂಸ್ಥೆಗಳಾಗಿದ್ದು, ಸಿದ್ಧಸಿರಿ ತನ್ನ ಸ್ವಂತ ಕಾರ್ಖಾನೆ ಸ್ಥಾಪನೆಗಾಗಿ ಮುಂದಾಗಿದೆ. ಬೇರೆ ಯಾವುದೇ ಸಂಸ್ಥೆಗೆ ಹಣ ಹೂಡಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಿದ್ಧಸಿರಿ ಸಂಸ್ಥೆಯ ಮೇಲೆ ಐಟಿ ಅಥವಾ ಇಡಿ ದಾಳಿ ನಡೆದಿಲ್ಲ. ಯಾವುದೇ ತನಿಖೆ ನಡೆಯುತ್ತಿಲ್ಲ. ಸಂಸ್ಥೆಯ ವಿರುದ್ಧ ರಾಜಕೀಯ ಉದ್ದೇಶದಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಒಟ್ಟಾರೆ, ಸಿದ್ಧಸಿರಿ ಸಹಕಾರಿ ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಕೇಳಿಬಂದಿರುವ ಪ್ರಶ್ನೆಗಳು ಹಾಗೂ ಸಂಸ್ಥೆ ನೀಡಿರುವ ಸ್ಪಷ್ಟನೆಗಳ ನಡುವೆ ಪ್ರಕರಣ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಧಿಕೃತ ದಾಖಲೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ನಿಲುವು ಹೊರಬಂದ ಬಳಿಕವಷ್ಟೇ ಈ ವಿಚಾರಕ್ಕೆ ಸಂಪೂರ್ಣ ಸ್ಪಷ್ಟತೆ ಸಿಗಬೇಕಿದೆ. ಇನ್ನೊಂದಡೆ ಶಾಸಕ ಯತ್ನಾಳ ರ ವರ್ಚಸ್ಸಿಗೆ ಧಕ್ಜೆ ತರಲು ಈ ಪತ್ರ ದಾಳವಾಯಿತೇ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!