ನವೆಂಬರ್ 14ರಂದು ನಡೆಯಲಿರುವ ಕೆಪಿಎಸ್ಸಿ ಪರೀಕ್ಷೆಗೆ ವಿಜಯಪುರ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 8,117 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಯಾವುದೇ ಗೊಂದಲ ಹಾಗೂ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದೆ. ಪ್ರಶ್ನೆಪತ್ರಿಕೆ ಸಾಗಣೆ ವೇಳೆ ನಿಗದಿತ ಮಾರ್ಗ, ಪೊಲೀಸ್ ಎಸ್ಕಾರ್ಟ್ ಹಾಗೂ ಶಸ್ತ್ರಸಜ್ಜಿತ ಸಿಬ್ಬಂದಿ ನಿಯೋಜಿಸ ಲಾಗುವುದು ಎಂದು ತಿಳಿಸಿದರು.
ಪರೀಕ್ಷಾರ್ಥಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದ ಎಸ್ಪಿಯವರು ಪರೀಕ್ಷಾ ಕೇಂದ್ರದ ಫ್ರಿಸ್ಕಿಂಗ್ ಪಾಯಿಂಟ್ ಒಳಗೆ ಹಾಲ್ ಟಿಕೆಟ್, ಗುರುತಿನ ಚೀಟಿ ಮತ್ತು ಪೆನ್ ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿದ್ದು ಮೊಬೈಲ್, ಬ್ಯಾಗ್, ಪುಸ್ತಕ ಸೇರಿದಂತೆ ಇತರೆ ವಸ್ತುಗಳಿಗೆ ಅವಕಾಶವಿಲ್ಲಾ ಎಂದರು. ಪರೀಕ್ಷಾರ್ಥಿಗಳು ಕೆಪಿಎಸ್ಸಿ ಪ್ರಕಟಿಸಿರುವ ಡ್ರೆಸ್ಕೋಡ್ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು. ಧಾರ್ಮಿಕ ಉಡುಪು ಧರಿಸುವ ಅಭ್ಯರ್ಥಿಗಳು ಎರಡೂವರೆ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಮೊದಲ ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳು ಕಡ್ಡಾಯವಾಗಿ ಕೇಂದ್ರದ ಆವರಣದಿಂದ ಹೊರಹೋಗಬೇಕು. ಎರಡನೇ ಪರೀಕ್ಷೆಗೆ ಮತ್ತೆ ಫ್ರಿಸ್ಕಿಂಗ್ ಹಾಗೂ ಫೇಸ್ ಐಡಿ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು.ಇದಲ್ಲದೆ, ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆಯ ವಿಶೇಷ ತಂಡ ನಿಗಾ ಇರಿಸಲಿದೆ.
ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇನ್ನು ಪರೀಕ್ಷಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಕೆಪಿಎಸ್ಸಿ ಮಾರ್ಗಸೂಚಿಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ತಮ್ಮ ಪರಿಶ್ರಮದ ಮೇಲೆ ವಿಶ್ವಾಸವಿಟ್ಟು ಪರೀಕ್ಷೆ ಬರೆಯಲಿ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಹಿಸಿಕೊಳ್ಳಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಆನಂದ ಆಡಳಿತಾತ್ಮಕ ಮಾಹಿತಿ ನೀಡಿದರು.
