Vijaypura

ಆಲಮಟ್ಟಿ ಜಲಾಶಯದ ನೀರಿನ ಹಕ್ಕಿಗಾಗಿ ಮಹಾರಾಷ್ಟ್ರಕ್ಕೆ ಬಿಜೆಪಿ ನಿಯೋಗ ಕೊಂಡೊಯ್ಯಲು ಪ್ರಯತ್ನ: ಗುರುಲಿಂಗಪ್ಪ ಅಂಗಡಿ

Share

ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಹರಿದು ಬರುವ ನೀರು ಸೇರಿದಂತೆ ಕರ್ನಾಟಕದ ಪಾಲಿನ ನೀರಿನ ಹಕ್ಕು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ವಿಜಯಪುರ ಜಿಲ್ಲೆಯ ರೈತರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಭಾರತೀಯ ಜನತಾ ಪಕ್ಷ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರಕ್ಕೆ ಬಿಜೆಪಿ ನಿಯೋಗ ಕೊಂಡೊಯ್ಯುವ ಕುರಿತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಾರ್ವಜನಿಕ ಸಭೆಯಲ್ಲಿ ನೀಡಿರುವ ಹೇಳಿಕೆ ಹಾಗೂ ಆಲಮಟ್ಟಿ ಜಲಾಶಯಕ್ಕೆ ಸಂಬಂಧಿಸಿದ ನೀರಿನ ವಿಚಾರವಾಗಿ ಕೇಳಿಬರುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲು ರಾಜ್ಯ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ಅಧಿಕೃತ ದಾಖಲೆಗಳನ್ನು ಪಡೆದು ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಮಹಾರಾಷ್ಟ್ರದಲ್ಲಿ ಅಂತಹ ಯೋಜನೆ ರೂಪುಗೊಳ್ಳುತ್ತಿದೆಯೇ, ಅದರ ಡಿಪಿಆರ್ ಸಿದ್ಧವಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಾತನಾಡುತ್ತಾರೆ.

ಆದರೆ ಕರ್ನಾಟಕದ ಹಿತಾಸಕ್ತಿ ಹಾಗೂ ವಿಜಯಪುರ ಜಿಲ್ಲೆಯ ರೈತರ ನೀರಿನ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕುರಿತು ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ಯೋಜನೆಯ ಕುರಿತು ಅಧಿಕೃತ ಮಾಹಿತಿ ಪಡೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಿದೆ ಎಂದು ಹೇಳಿದರು. ಇನ್ನು ಮಹಾರಾಷ್ಟ್ರಕ್ಕೆ ಬಿಜೆಪಿ ಜಿಲ್ಲಾ ಘಟಕದಿಂದಲೇ ನಿಯೋಗ ಕೊಂಡೊಯ್ದು, ನಮ್ಮ ಜಿಲ್ಲೆಗೆ ನೀರಿನ ಸಮಸ್ಯೆ ಯಾಗುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅಲ್ಲಿನ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬಹುದಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯದಲ್ಲಿ ನಿಯೋಗ ಕೊಂಡೊಯ್ಯುವ ಅಗತ್ಯವಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ನಿಯೋಗ ತೆರಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಆಲಮಟ್ಟಿ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧವಾಗಿದೆ ಎಂಬ ಚರ್ಚೆಗಳಿದ್ದರೆ, ರಾಜ್ಯ ಸರ್ಕಾರ ಈ ಕುರಿತು ಮಹಾರಾಷ್ಟ್ರದಿಂದ ಅಧಿಕೃತ ಸ್ಪಷ್ಟೀಕರಣ ಪಡೆಯಬೇಕು. ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಕರ್ನಾಟಕದ ನೀರಿನ ಹಿತಾಸಕ್ತಿಗೆ ಧಕ್ಕೆಯಾಗುವ ಅಂಶಗಳಿದ್ದರೆ ಬಿಜೆಪಿ ಕೂಡ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದು ಗುರುಲಿಂಗಪ್ಪ ಅಂಗಡಿ ಸ್ಪಷ್ಟಪಡಿಸಿದರು.

Tags:

error: Content is protected !!