Vijaypura

ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂಬ ಹೇಳಿಕೆ ಖಂಡನೀಯ; ಕಣ್ಣೇರಿ ಸ್ವಾಮೀಜಿ ದಲಿತ ಸಮಾಜದ ಕ್ಷಮೆ ಕೇಳಬೇಕು: ಪ್ರೊ. ರಾಜು ಆಲಗೂರ

Share

ಸಂವಿಧಾನದಲ್ಲಿ ಮನುಸ್ಮೃತಿಯ ಎಲ್ಲ ಅಂಶಗಳು ಅಡಕವಾಗಿವೆ ಎಂದು ಹೇಳಿಕೆ ನೀಡಿರುವ ಕಣ್ಣೇರಿ ಸ್ವಾಮೀಜಿಯವರ ವಿರುದ್ಧ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರೊ. ರಾಜು ಆಲಗೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸ್ವಾಮೀಜಿಯವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಾರತೀಯ ಸಂವಿಧಾನದ ಕುರಿತು ಅತ್ಯಂತ ಹಗುರವಾಗಿ ಮತ್ತು ಬೇಜವಾಬ್ದಾರಿ ಯಿಂದ ಮಾತನಾಡಿದ್ದಾರೆ. ಅವರ ಈ ಹೇಳಿಕೆ ದಲಿತ ಸಮುದಾಯ ಮಾತ್ರವಲ್ಲದೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರ ಭಾವನೆಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಕಣ್ಣೇರಿ ಸ್ವಾಮೀಜಿಯವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಯಾವುದೇ ಸ್ವಾಮೀಜಿಗ ಳ, ಧರ್ಮಗಳ ಅಥವಾ ಸಮುದಾಯ ಗಳ ವಿರುದ್ಧವಲ್ಲ. ಎಲ್ಲ ಧರ್ಮಗಳ, ಎಲ್ಲ ನಾಗರಿಕರ ಹಾಗೂ ಎಲ್ಲ ಸ್ವಾಮೀಜಿಗಳ ಬಗ್ಗೆ ಗೌರವ ಹೊಂದಿದ್ದೇವೆ. ಆದರೆ, ಸಂವಿಧಾನ ಮತ್ತು ಅಂಬೇಡ್ಕರ್ ಅವರ ಕುರಿತು ತಪ್ಪು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಸಂವಿಧಾನ ರಚನೆಯ ಸಂದರ್ಭದಲ್ಲಿ 395 ವಿಧಿಗಳು ಹಾಗೂ 8 ಅನುಸೂಚಿಗಳಿದ್ದವು. ನಂತರದ ತಿದ್ದುಪಡಿಗಳ ಮೂಲಕ ಸಂವಿಧಾನದಲ್ಲಿ ಹಲವು ಬದಲಾವಣೆಗಳಾಗಿವೆ. ಪ್ರಸ್ತುತ 12 ಅನುಸೂಚಿಗಳಿವೆ. ಇಂತಹ ಮಹತ್ವದ ಸಂವಿಧಾನದ ಬಗ್ಗೆ ಮಾತನಾಡುವ ಮೊದಲು ಅದರ ಕುರಿತು ಸಮಗ್ರ ಅಧ್ಯಯನ ಮಾಡಬೇಕಿತ್ತು. ಯಾವುದೇ ಅಧ್ಯಯನವಿಲ್ಲದೆ ಅಂಬೇಡ್ಕರ್ ಅವರ ಕುರಿತು ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಲಗೂರ ಟೀಕಿಸಿದರು. ಇದೇ ವೇಳೆ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಸಂವಿಧಾನ ಜಾರಿಯಾದ ಸಂದರ್ಭದಲ್ಲಿ ಅದರ ವಿರುದ್ಧ ಲೇಖನಗಳು ಪ್ರಕಟವಾಗಿದ್ದವು. ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳು ಹಾಗೂ ತಮ್ಮ ದೃಷ್ಟಿಯ ಭಾರತೀಯತೆಯಿಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಸಂವಿಧಾನದ ಕುರಿತು ಇತಿಹಾಸವನ್ನು ಅರಿಯದೆ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಣ್ಣೇರಿ ಸ್ವಾಮೀಜಿಯವರ ಹೇಳಿಕೆ ಅಂಬೇಡ್ಕರ್ ಅವರನ್ನು ಗೌರವಿಸುವ ಹಾಗೂ ಭಾರತೀಯ ಸಂವಿಧಾನ ವನ್ನು ಪ್ರೀತಿಸುವ ಕೋಟ್ಯಂತರ ಜನರಿಗೆ ಮಾಡಿದ ಅಪಮಾನ ವಾಗಿದೆ. ಸ್ವಾಮೀಜಿ ಯವರು ತಮ್ಮ ಹೇಳಿಕೆಯನ್ನು ಹಿಂಪಡೆದು ದಲಿತ ಸಮಾಜ ಹಾಗೂ ಪ್ರಜಾಪ್ರಭುತ್ವ ವನ್ನು ಒಪ್ಪುವ ಸಮಸ್ತ ಜನತೆಯ ಕ್ಷಮೆಯಾಚಿಸಬೇಕು. ಇಲ್ಲವಾದರೆ ಈ ವಿಚಾರದಲ್ಲಿ ಹೋರಾಟ ಮುಂದುವರಿ ಸಲಾಗುವುದು ಎಂದು ಪ್ರೊ. ರಾಜು ಆಲಗೂರ ಎಚ್ಚರಿಕೆ ನೀಡಿದರು. ಈ ವೇಳೆ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!