ಬೆಳಗಾವಿಯಲ್ಲಿ ನಡೆದ ಸರ್ವೇಶ್ ಕಂಗ್ರಾಳಕರ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೃತ್ಯ ನಡೆದು ತಿಂಗಳಗಳೇ ಕಳೆದಿದ್ದರೂ ಪ್ರಮುಖ ಆರೋಪಿ ಯುವತಿ ಹಾಗೂ ಇತರೆ ತಲೆಮರೆಸಿಕೊಂಡಿರುವವರನ್ನು ಪೊಲೀಸರು ಬಂಧಿಸಿಲ್ಲ ಎಂದು ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಪರಿಚಯವೇ ಈ ಭೀಕರ ಕೊಲೆಗೆ ಕಾರಣವಾಗಿದ್ದು, ಪೊಲೀಸರ ತನಿಖೆಯ ಬಗ್ಗೆಯೂ ಗಂಭೀರ ಆರೋಪಗಳು ಕೇಳಿಬಂದಿವೆ.
ಸೆಪ್ಟೆಂಬರ್ 23ರಂದು ನಡೆದ ಸರ್ವೇಶ್ ಕಂಗ್ರಾಳಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಶ್ರೇಯಾ ಜಗದಾಳೆ ಎಂಬ ಯುವತಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ ಎಂದು ಮೃತರ ಸಂಬಂಧಿ ರೋಹಿತ್ ಭರಮಪ್ಪ ತಳವಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ 15 ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿ, ಘಟನೆಯ ದಿನ ರಾತ್ರಿ ಮೆಸೇಜ್ ಮಾಡಿ ಸರ್ವೇಶ್ ಅವರನ್ನು ಭೇಟಿಯಾಗಲು ಕರೆಸಿಕೊಂಡು ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಈಗಾಗಲೇ 7 ಜನರನ್ನು ಬಂಧಿಸಲಾಗಿದ್ದರೂ, ಹತ್ಯೆಗೆ ಕಾರಣಳಾದ ಯುವತಿ ಹಾಗೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರಾದವರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿಲ್ಲ ಎಂದು ದೂರಿದ್ದಾರೆ.
ಘಟನಾ ಸ್ಥಳದಲ್ಲಿ ಬೂಟು ಸಿಕ್ಕರೂ ಪೊಲೀಸರು ಸಿಕ್ಕಿಲ್ಲ ಎಂದು ಸತ್ಯ ಮುಚ್ಚಿಡುತ್ತಿದ್ದಾರೆ ಹಾಗೂ ಪ್ರಮುಖ ಆರೋಪಿಗಳ ಬಂಧನದ ಬಗ್ಗೆ ಕೇಳಿದರೆ “ಹುಡುಕಾಡುತ್ತಿದ್ದೇವೆ” ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ ಎಂದು ರೋಹಿತ್ ಪೊಲೀಸರ ತನಿಖಾ ವೈಖರಿಯನ್ನು ಪ್ರಶ್ನಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಯುವತಿ ಹಾಗೂ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.
