ಪೆಟ್ರೋಲ್-ಡೀಸೆಲ್ನಲ್ಲಿ ಮಿತಿಗಿಂತ ಹೆಚ್ಚು ಇಥನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್ ಹಾನಿಗೊಳ್ಳುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಾದ್ಯಂತ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳೊಂದಿಗೆ ಕೇಂದ್ರ ಸರ್ಕಾರದ ಬಾಗಿಲು ತಟ್ಟಿರುವ ರಾಜ್ಯ ಸರ್ಕಾರ, ಜನಸಾಮಾನ್ಯರಿಗಾಗುತ್ತಿರುವ ನಷ್ಟದ ವಿರುದ್ಧ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಇಂಧನದಲ್ಲಿ ಶೇಕಡಾ 20ರ ಬದಲಿಗೆ ಶೇ. 20 ರಿಂದ 30ರಷ್ಟು ಇಥನಾಲ್ ಕಡ್ಡಾಯವಾಗಿ ಮಿಶ್ರಣ ಮಾಡುತ್ತಿರುವುದರಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಎಂಜಿನ್ಗಳು ಪೂರ್ತಿ ಹಾಳಾಗುತ್ತಿವೆ. ರಸ್ತೆ ಮಧ್ಯದಲ್ಲೇ ವಾಹನಗಳು ಕೆಟ್ಟು ನಿಲ್ಲುತ್ತಿರುವುದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. ರಾಜ್ಯದ ಸುಮಾರು 67 ಕಡೆಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದನ್ನು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ತನಿಖೆಗೆ ಆಗ್ರಹಿಸಲಾಗಿದೆ ಎಂದರು. ಇದು ಕೇವಲ ರಾಜಕಾರಣಿಗಳ ಸಮಸ್ಯೆಯಲ್ಲ, ಪ್ರತಿಯೊಬ್ಬ ಸಾರ್ವಜನಿಕರ ಕಾರು, ಸ್ಕೂಟರ್ಗಳ ಆಯಸ್ಸು ಕಡಿಮೆಯಾಗಿ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಅವರು, ಮೊದಲು ಕಳಪೆ ಇಥನಾಲ್ ಮಿಶ್ರಣದಿಂದ ಜನರಿಗಾಗುತ್ತಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಲಿ ಎಂದು ಸವಾಲು ಹಾಕಿದರು. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಕಾತುರದಿಂದ ಕಾಯುತ್ತಿದ್ದ ನಿಗಮ ಮಂಡಳಿ ನೇಮಕಾತಿ ಕುರಿತು ಸುಳಿವು ನೀಡಿದ ಡಿಕೆಶಿ, ಮೊದಲ ಹಂತದಲ್ಲಿ 500 ಜನರ ಬೋರ್ಡ್ ಆಫ್ ಡೈರೆಕ್ಟರ್ಸ್ ಪಟ್ಟಿಗೆ ಸಹಿ ಹಾಕಲಾಗಿದೆ ಎಂದರು. ಒಟ್ಟು ಮೂರು ಹಂತಗಳಲ್ಲಿ ಪಟ್ಟಿಗಳು ಬಿಡುಗಡೆಯಾಗಲಿದ್ದು, ಶಾಸಕರಿಗೂ ಹಾಗೂ ಪಕ್ಷದ ಹಿರಿಯ ಮುಖಂಡರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
