State

ಪೆಟ್ರೋಲ್‌ನಲ್ಲಿ ಶೇ. 30ಕ್ಕೂ ಹೆಚ್ಚು ಎಥೆನಾಲ್!!!

Share

ರಾಜ್ಯದಲ್ಲಿ ಪೆಟ್ರೋಲ್‌ಗೆ ಶೇ. 30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರದ ಮೌನವನ್ನು ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರದ ವರದಿಯನ್ನು ತೈಲ ಕಂಪನಿಗಳು ತಾಂತ್ರಿಕ ನೆಪ ಹೇಳಿ ಮುಚ್ಚಿಹಾಕಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಪೆಟ್ರೋಲ್ ಪರೀಕ್ಷೆ ನಡೆಸಿದಾಗ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಈ ಅತಿಯಾದ ಎಥೆನಾಲ್ ಮಿಶ್ರಣದಿಂದ ದಿನನಿತ್ಯ ಪೆಟ್ರೋಲ್ ಬಳಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಇಂಜಿನ್‌ಗಳು ಹಾಳಾಗುತ್ತಿವೆ. ಎಥೆನಾಲ್‌ನಲ್ಲಿ ಕ್ಲೋರೈಡ್ ಹಾಗೂ ಸಲ್ಫರ್ ಪ್ರಮಾಣ ಹೆಚ್ಚಿದ್ದು, ಶೇ. 30ರಷ್ಟು ಎಥೆನಾಲ್ ಮಿಕ್ಸ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ ಎಂದು ಬಿಎಂಡಬ್ಲ್ಯೂ ಸಂಸ್ಥೆಯೂ ಹೇಳಿದೆ. ರಾಜ್ಯ ಸರ್ಕಾರದ ಈ ವರದಿಗೆ ಕೇಂದ್ರ ಸರ್ಕಾರ ನೇರ ಉತ್ತರ ನೀಡದೆ, ತೈಲ ಕಂಪನಿಗಳಿಂದ ಹಾರಿಕೆ ಉತ್ತರ ಕೊಡಿಸುತ್ತಿದೆ ಎಂದು ಸಚಿವರು ಆರೋಪಿಸಿದರು.

ತೈಲ ಕಂಪನಿಗಳು 6 ಕಡೆಗಳಲ್ಲಿ ಅತಿಯಾಗಿ ಎಥೆನಾಲ್ ಮಿಶ್ರಣ ಮಾಡುತ್ತಿದ್ದು, ಇದು ತಾಂತ್ರಿಕ ಹಾಗೂ ಡೀಲರ್‌ಗಳ ಕೆಲಸ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿವೆ. ರಾಜ್ಯದ ಮಾದರಿ ಸಂಗ್ರಹಣೆ ಸರಿಯಾಗಿದೆ ಮತ್ತು ಎಥೆನಾಲ್ ಪ್ರಮಾಣ ಪತ್ತೆ ಮಾಡುವುದು ರಾಕೆಟ್ ಸೈನ್ಸ್ ಏನಲ್ಲ ಎಂದು ಕಿಡಿಕಾರಿದ ಅವರು, ಇಲ್ಲಿ ತೈಲ ಕಂಪನಿಗಳೇ ಆರೋಪಿ ಹಾಗೂ ನ್ಯಾಯಾಧೀಶರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಕರ್ನಾಟಕದ ವರದಿ ಬೆನ್ನಲ್ಲೇ ಕೇರಳ ಸರ್ಕಾರವೂ ಎಚ್ಚೆತ್ತುಕೊಂಡಿದ್ದು, ತಿರುವಂತಪುರಂ, ಎರ್ನಾಕುಲಂ ಸೇರಿದಂತೆ 4 ಜಿಲ್ಲೆಗಳ ಪೆಟ್ರೋಲ್ ಬಂಕ್‌ಗಳಿಂದ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಶೇ. 20ಕ್ಕಿಂತ ಹೆಚ್ಚು ಎಥೆನಾಲ್ ಕಂಡುಬಂದರೆ ಬಂಕ್ ಸೀಲ್ ಮಾಡುವುದಾಗಿ ಕೇರಳ ಸರ್ಕಾರ ಎಚ್ಚರಿಸಿದೆ.

Tags:

error: Content is protected !!