Hukkeri

ಹುಕ್ಕೇರಿಯಲ್ಲಿ ರೈತರ ಬೃಹತ್ ಪ್ರತಿಭಟನೆ

Share

ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಹಾಗೂ ರೈತ ಮುಖಂಡರ ಬಂಧನ ಖಂಡಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸಂಕೇಶ್ವರದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಪ್ರತಿಭಟನಾನಿರತರನ್ನು ತಡೆದ ಹಿನ್ನೆಲೆಯಲ್ಲಿ ಸಂಕೇಶ್ವರದ ಡಿ ಮಾರ್ಟ್ ಮಳಿಗೆಗೆ ಮುತ್ತಿಗೆ ಹಾಕಿದ ರೈತರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕಬ್ಬಿನ ಬೆಂಬಲ ಬೆಲೆಗಾಗಿ ಸಾಗುತ್ತಿದ್ದ ರೈತ ಮುಖಂಡರಾದ ಶಶಿಕಾಂತ್ ಗುರೂಜಿ ಹಾಗೂ ಚೂನ್ನಪ್ಪ ಪೂಜಾರಿ ಅವರ ಬಂಧನವನ್ನು ಖಂಡಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಮಾರುಕಟ್ಟೆಯಲ್ಲಿ ಸಕ್ಕರೆ ದರ ಪ್ರತಿ ಕ್ವಿಂಟಾಲ್‌ಗೆ ಗಣನೀಯವಾಗಿ ಏರಿಕೆಯಾಗಿದ್ದು, ಅದಕ್ಕೆ ತಕ್ಕಂತೆ ಕಬ್ಬಿಗೂ ಸರ್ಕಾರ ತಕ್ಷಣವೇ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಬಂಧಿತ ಮುಖಂಡರನ್ನು ಯಾವುದೇ ಷರತ್ತಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಸಂಕೇಶ್ವರ ನಗರಕ್ಕೆ ಆಗಮಿಸಿದ ನೂರಾರು ರೈತರು ಅಲ್ಲಿದ್ದ ಡಿ ಮಾರ್ಟ್ ಮಳಿಗೆಗೆ ದಿಢೀರ್ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಶ್ರಮಿಸಿದರಾದರೂ, ರೈತರ ತೀವ್ರ ಪ್ರತಿಭಟನೆಯಿಂದಾಗಿ ಹುಕ್ಕೇರಿ ಮತ್ತು ಸಂಕೇಶ್ವರ ಭಾಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

Tags:

error: Content is protected !!