ಹುಕ್ಕೇರಿ ತಾಲೂಕಿನಲ್ಲಿ ರೈತರು ಭೂಮಿ ಹಾಗೂ ಬೆಳೆ ಪರಿಹಾರಕ್ಕಾಗಿ ತೀವ್ರ ಪ್ರತಿಭಟನೆ ನಡೆಸಿದ್ದು, ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಹುಕ್ಕೇರಿ ತಾಲೂಕಿನ ಹುಕ್ಕೇರಿ ನಗರ, ಸಂಕೇಶ್ವರ ನಗರ, ನೇರಲಿ ಮತ್ತು ಕಮತನೂರ ಗೇಟ್ ಸೇರಿದಂತೆ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ರೈತರು ಆಕ್ರೋಶಭರಿತ ಪ್ರತಿಭಟನೆ ನಡೆಸಿದರು. ದಿಢೀರ್ ರಸ್ತೆ ತಡೆ ನಡೆಸಿದ ಕಾರಣದಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ವಿಶೇಷವಾಗಿ ಹುಕ್ಕೇರಿ ಹಾಗೂ ಸಂಕೇಶ್ವರ ಬಸ್ ನಿಲ್ದಾಣಗಳಿಂದ ಯಾವುದೇ ಬಸ್ಗಳು ರಸ್ತೆಗೆ ಇಳಿಯದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಮಾತನಾಡಿ, ರೈತರು ಹಗಲಿರುಳು ಕಷ್ಟಪಟ್ಟು ದುಡಿದರೂ ಇಂದು ಅವರ ಬದುಕು ಅತಂತ್ರವಾಗಿದೆ ಎಂದರು. ಹೊಲದಲ್ಲಿ ದುಡಿಯಲಾಗದ ಪರಿಸ್ಥಿತಿ ನಿರ್ಮಾಣವಾದರೆ ರೈತನ ಬದುಕು ಬೀದಿಗೆ ಬೀಳಲಿದೆ. ಆದರೆ ಶ್ರೀಮಂತರು ಮಾತ್ರ ತಲೆಮಾರುಗಳಿಗೆ ಆಗುವಷ್ಟು ಸಂಪತ್ತು ಶೇಖರಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಕೆಲವರು ಮಾತ್ರವಲ್ಲದೆ ಎಲ್ಲ ರೈತರು ಒಗ್ಗಟ್ಟಾಗಿ ನಿರಂತರ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.

ಜಮೀನು ಹಾಗೂ ಬೆಳೆ ಪರಿಹಾರದ ವಿಚಾರದಲ್ಲಿ ಅಧಿಕಾರಿಗಳು ಸೂಕ್ತ ನ್ಯಾಯ ನೀಡದಿದ್ದರೆ ಬಿಡುವುದಿಲ್ಲ ಎಂದು ವಕ್ತಾರರು ಎಚ್ಚರಿಸಿದರು. ಹಿಂದೆ ಎಕರೆಗೆ ಕೆಲವೇ ಲಕ್ಷವಿದ್ದ ಭೂಮಿಯ ಬೆಲೆ ಈಗ ಕೋಟಿಗಳಿಗೆ ಏರಿದ್ದರೂ ರೈತರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಸಾಯನಿಕ ಕೀಟನಾಶಕಗಳ ಅತಿಯಾದ ಬಳಕೆಯಿಂದ ಸಮಾಜಕ್ಕೆ ವಿಷ ಉಣಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ರೈತ ಮಹಿಳೆಯರೂ ಸಹ ದೊಡ್ಡ ಸಂಖ್ಯೆಯಲ್ಲಿ ರೊಚ್ಚಿಗೆದ್ದು ಈ ಹೋರಾಟದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.


