Belagavi

ಕಬ್ಬು ಬೆಳೆಗೆ ಅನ್ನದಾತರ ಹೋರಾಟದ ಕಿಚ್ಚು, ಡಿಸಿ ಕಚೇರಿಗೆ ಬೀಗ ಹಾಕಲು ಮುಂದಾದ ರೈತರು

Share

ಸೂಕ್ತ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣ ಪ್ರಾರಂಭಿಸಲು ಒತ್ತಾಯಿಸಿ ಬೆಳಗಾವಿಯಲ್ಲಿ ರೈತರ ಹೋರಾಟ ಉಗ್ರರೂಪ ತಳೆದಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ, ರಾಣಿ ಚೆನ್ನಮ್ಮ ವೃತ್ತ ಬಂದ್ ಮಾಡಲು ಮುಂದಾಗಿರುವ ರೈತರು, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಕಬ್ಬು ಬೆಳೆಗೆ ಸೂಕ್ತ ದರ ನಿಗದಿಪಡಿಸದೇ ಜಿಲ್ಲಾಡಳಿತ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ರೈತರು ಮತ್ತು ರೈತ ಸಂಘಟನೆ ಮುಖಂಡರು ಬೃಹತ್ ಧರಣಿ ನಡೆಸುತ್ತಿದ್ದಾರೆ. ರೈತ ಮುಖಂಡ ಗಣೇಶ್ ಇಳಿಗೇರ್ ಹಾಗೂ ಸುರೇಶ್ ಪರಗಣ್ಣವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಕಚೇರಿಯ ಗೇಟ್‌ಗೆ ಹಸಿರು ಶಾಲನ್ನು ಕಟ್ಟಿ ಬೀಗ ಜಡಿಯಲು ಯತ್ನಿಸಿದರು.

ನಿನ್ನೆ ರಾತ್ರಿ 10 ಗಂಟೆಯವರೆಗೆ ಜಿಲ್ಲಾಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಸುದೀರ್ಘ ಸಭೆ ನಡೆದರೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಲಗಳಲ್ಲಿ ಕಬ್ಬು ಒಣಗಿ ಹೋಗುತ್ತಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,000 ರೂಪಾಯಿ ದರ ಘೋಷಣೆ ಮಾಡಬೇಕು ಮತ್ತು ಕೂಡಲೇ ಕಬ್ಬು ಕಟಾವು ಪ್ರಕ್ರಿಯೆ ಆರಂಭಿಸಲು ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.

ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ಕೆಲವೇ ಕ್ಷಣಗಳಲ್ಲಿ ಬೆಳಗಾವಿಯ ಪ್ರಮುಖ ಸ್ಥಳವಾದ ರಾಣಿ ಚೆನ್ನಮ್ಮ ಸರ್ಕಲ್ ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಒಂದು ವೇಳೆ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಇಂದೇ ಬೆಲೆ ಘೋಷಿಸದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ನೇರವಾಗಿ ಮುತ್ತಿಗೆ ಹಾಕಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ನಾಯಕರು ಕಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ನೂಕಾಟ-ತಳ್ಳಾಟ ಹಾಗೂ ವಾಗ್ವಾದ ಏರ್ಪಟ್ಟು, ಮಹಿಳೆಯೊಬ್ಬರು ಕೆಳಗೆ ಬಿದ್ದು ಗಾಯಗೊಂಡ ಘಟನೆಯೂ ನಡೆಯಿತು.

Tags:

error: Content is protected !!