ನಗರದ ರಸ್ತೆಗಳ ಮೇಲೆ ವಾಹನ ಚಲಾಯಿಸುವುದೇ ಈಗ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಒಂದೆಡೆ ಹದಗೆಟ್ಟ ರಸ್ತೆಗಳು, ಮತ್ತೊಂದೆಡೆ ಎಲ್ಲೆಂದರಲ್ಲಿ ಬಾಯ್ತೆರೆದಿರುವ ತಗ್ಗು-ಗುಂಡಿಗಳು. ಇಂತಹ ರಸ್ತೆಗಳ ಮೇಲೆ ಸಂಚರಿಸುವ ವಾಹನ ಸವಾರರಿಗೆ ಅಪಘಾತದ ಭೀತಿ ಪ್ರತಿದಿನವೂ ಕಾಡುತ್ತಿದೆ. ಅದರಲ್ಲೂ ಚಿಗರಿ ಬಸ್‌ಗಳ ಸಂಚಾರದ ನಡುವೆ ಸಣ್ಣ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಇದೆ.

ಇದಕ್ಕೆ ಸಾಕ್ಷಿಯೆಂಬಂತೆ ಇಂದು ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಭೀಕರ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಭೀಮಣ್ಣ ಎಂಬುವವರು ಬೈಕ್‌ನಲ್ಲಿ ಸಿಬಿಟಿ ಕಡೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ತಗ್ಗು-ಗುಂಡಿಯಿಂದಾಗಿ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲೇ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಚಿಗರಿ ಬಸ್ ಬರುತ್ತಿತ್ತು. ಕ್ಷಣಮಾತ್ರ ತಡವಾಗಿದ್ದರೂ ಬಸ್ ಚಕ್ರಕ್ಕೆ ಸಿಲುಕಿ ಭೀಮಣ್ಣ ಅವರ ತಲೆಯ ಮೇಲೆಯೇ ಬಸ್ ಹರಿದು ಹೋಗುವ ಭೀಕರ ಅಪಾಯವಿತ್ತು. ಆದರೆ ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಭೀಮಣ್ಣ ಅವರನ್ನು ತೀವ್ರ ಆಘಾತಕ್ಕೆ ತಳ್ಳಿತ್ತು. ಆಗ ಅವರು ತಮ್ಮ ಜೀವ ಉಳಿದರೆ ಸಾಕೆಂದು ಸುಮ್ಮನಾಗಲಿಲ್ಲ. ಇದೇ ಗುಂಡಿಯಿಂದ ನಾಳೆ ಮತ್ತೊಬ್ಬ ಅಮಾಯಕ ಸವಾರನ ಜೀವ ಹೋಗಬಾರದು ಎಂದು ನಿರ್ಧರಿಸಿ, ತಮ್ಮ ಸ್ವಂತ ಹಣ ಖರ್ಚು ಮಾಡಿ ರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರೂ ಇದಕ್ಕೆ ಸಹಕಾರ ನೀಡಿದ್ದಾರೆ.
ಇಲ್ಲಿ ನಿಜಕ್ಕೂ ಪ್ರಶ್ನೆ ಉದ್ಭವಿಸುವುದು ಭೀಮಣ್ಣ ಅವರ ಕಾರ್ಯದ ಬಗ್ಗೆ ಅಲ್ಲ, ನಗರದಲ್ಲಿ ರಸ್ತೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವ್ಯವಸ್ಥೆಯ ಬಗ್ಗೆ
ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಒಬ್ಬ ಸಾಮಾನ್ಯ ಬೈಕ್ ಸವಾರ ತನ್ನ ಜೀವ ಉಳಿದ ಸಂತೋಷದ ನಡುವೆಯೇ ಸ್ವಂತ ಹಣ ಖರ್ಚು ಮಾಡಿ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ವ್ಯವಸ್ಥೆಯ ದುರಂತವಲ್ಲವೇ?
ಗುಂಡಿ ಮುಚ್ಚಲು ಜನಪ್ರತಿನಿಧಿಗಳಿಗಾಗಿ ಕಾಯಬೇಕೇ? ಅಥವಾ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕೇ?
ಹುಬ್ಬಳ್ಳಿ-ಧಾರವಾಡದ ರಸ್ತೆಗಳಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳ ನಡುವೆ ರಸ್ತೆಗಳಿವೆಯೋ ಎಂಬುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುವುದಕ್ಕಿಂತ ಮೊದಲು ನಗರದ ರಸ್ತೆಗಳನ್ನು ಒಮ್ಮೆ ಸುತ್ತಿ ನೋಡಬೇಕಿದೆ.
ಇಂದು ಭೀಮಣ್ಣ ಅವರ ಜೀವ ಉಳಿದಿದೆ. ನಾಳೆ ಮತ್ತೊಬ್ಬರ ಜೀವ ಉಳಿಯುತ್ತದೆ ಎಂಬ ಖಾತರಿ ಏನು? ಪ್ರತಿ ಅಪಘಾತದ ನಂತರ ಪರಿಹಾರ, ಸಂತಾಪ, ಭರವಸೆ ನೀಡುವುದಕ್ಕಿಂತ ಅಪಘಾತವೇ ಸಂಭವಿಸದಂತೆ ರಸ್ತೆಗಳ ದುರಸ್ತಿ ಮಾಡುವುದು ಆಡಳಿತದ ಮೊದಲ ಕರ್ತವ್ಯ.
ಒಟ್ಟಿನಲ್ಲಿ, ಭೀಮಣ್ಣ ಮುಚ್ಚಿದ್ದು ರಸ್ತೆಯ ಒಂದು ಗುಂಡಿಯನ್ನಷ್ಟೇ ಅಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಮುಖವಾಡವನ್ನೂ ಕಳಚಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ರಸ್ತೆಗಳನ್ನು ದುರಸ್ತಿಗೊಳಿಸಿ, ಮತ್ತೊಂದು ಅಮಾಯಕ ಜೀವ ಬಲಿಯಾಗುವ ಮುನ್ನ ಎಚ್ಚರ ವಹಿಸಬೇಕಿದೆ ಎಂಬುದು ಭೀಮಣ್ಣ ಅವರ ಒತ್ತಾಯವಾಗಿದೆ.
