ಕಾಗವಾಡ ಮತಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ‘ವೋಟ್ ಬಚಾವ್, ದೇಶ ಬಚಾವ್’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನದ ಮೂಲಕ ಮತದಾನದ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ಬೂತ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ಅಭಿಯಾನದ ಕಾಗವಾಡ ಮತಕ್ಷೇತ್ರದ ಉಸ್ತುವಾರಿ ಹಾಗೂ ಅಥಣಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗಜಾನನ ಮಂಗಸೂಳಿ ತಿಳಿಸಿದರು.
ಮಂಗಳವಾರ ಉಗಾರದ ಶಾಸಕ ರಾಜು ಕಾಗೆ ಅವರ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಜನರ ಮುಂದಿಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವು ಇಂಡಿಯಾ ಒಕ್ಕೂಟಕ್ಕಿಂತ ಶೇ. 3ರಷ್ಟು ಹೆಚ್ಚು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ. ಆದರೆ, ಶೇ. 15ರಷ್ಟು ಮತಗಳ್ಳತನ ನಡೆದಿದೆ ಎಂಬ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯುಕ್ತ ಜ್ಞಾನೇಶ್ವರ್ ಅವರೇ ಕಾರಣ ಎಂಬುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ ಎಂದು ಮಂಗಸೂಳಿ ಹೇಳಿದರು.
ಈ ಹಿನ್ನೆಲೆಯಲ್ಲಿ ಕಾಗವಾಡ ಮತಕ್ಷೇತ್ರದ ಪ್ರತಿಯೊಂದು ಬೂತ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ 11ರಿಂದ ಒಂದು ವಾರದವರೆಗೆ ಬ್ಲಾಕ್ ಮಟ್ಟದಲ್ಲಿ ಹಾಗೂ 20ರಿಂದ ಒಂದು ವಾರದವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನ ನಡೆಯಲಿದೆ. ಮನೆಮನೆಗೆ ತೆರಳಿ ಮತದಾನದ ಹಕ್ಕು ಮತ್ತು ಮತಗಳ್ಳತನದ ಆರೋಪಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜು ಕಾಗೆ ಮಾತನಾಡಿ, ‘ವೋಟ್ ಬಚಾವ್, ದೇಶ ಬಚಾವ್’ ಅಭಿಯಾನದ ಮೂಲಕ ಪ್ರತಿಯೊಂದು ಹಳ್ಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನ್ಯ ಜನರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ಒಬ್ಬ ಭಿಕ್ಷುಕನ ಮತಕ್ಕೂ ಪ್ರಧಾನಿಯ ಮತದಷ್ಟೇ ಮೌಲ್ಯವಿದೆ. ಇದು ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಸಮಾನ ಹಕ್ಕಾಗಿದೆ. ಈ ಹಕ್ಕನ್ನು ಕಳೆದುಕೊಳ್ಳದೆ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಕಾಗವಾಡ ಮತಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಚಂದ್ರಕಾಂತ ಇಮ್ಮಡಿ, ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಅನಂತಪುರ ಬ್ಲಾಕ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
