Nippani

ಕರಾಳದಿನಕ್ಕೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಶಿವಸೇನಾ ಕಾರ್ಯಕರ್ತರನ್ನು ಗಡಿಯಲ್ಲೇ ತಡೆದ ಬೆಳಗಾವಿ ಪೊಲೀಸರು

Share

ಬೆಳಗಾವಿ ಗಡಿ ಪ್ರದೇಶದಲ್ಲಿ ಮತ್ತೆ ಗಡಿ ವಿವಾದದ ಕಿಡಿ ಹೊತ್ತಿಕೊಂಡಿದೆ. ಕರಾಳ ದಿನ ಆಚರಣೆಗೆ ಬೆಳಗಾವಿಗೆ ಹೊರಟಿದ್ದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ತೀವ್ರ ವಾಗ್ವಾದ ಹಾಗೂ ನೂಕುನುಗ್ಗಲು ಉಂಟಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ‘ಕರಾಳ ದಿನ’ ಆಚರಿಸಲು ಹೊರಟಿದ್ದ ಶಿವಸೇನೆ (ಯುಬಿಟಿ) ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕರ್ನಾಟಕ ರಾಜ್ಯ ಗಡಿ ನಿಪ್ಪಾಣಿ ಟೋಲ್ ನಾಕಾ ಬಳಿ ಪೊಲೀಸರು ತಡೆದು ನಿಲ್ಲಿಸಿದರು. ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸರು ನಿಷೇಧ ಹೇರಿದ್ದರೂ, ಅದನ್ನು ಧಿಕ್ಕರಿಸಿ ಮುನ್ನುಗ್ಗಲು ಯತ್ನಿಸಿದ ಶಿವಸೈನಿಕರನ್ನು ತಡೆಯುವಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ನೂಕುನುಗ್ಗಲು ನಡೆಯಿತು. ಗಡಿ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ನಾಟಕ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಈ ಘರ್ಷಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ನಾಯಕರಾದ ವಿಜಯ್ ದೇವಣೆ, ವಿರಾಜ್ ಪಾಟೀಲ್, ಪ್ರಕಾಶ್ ಪಾಟೀಲ್, ರಾಜು ಯಾದವ್, ವಿನೋದ್ ಖೋತ್, ಸತಾಪ್ಪ ನರಕೆ, ಅವಧೂತ್ ಸಾಳೋಖೆ, ಮಾರುತಿ ಪುರಿಬುವಾ, ದಿಗ್ವಿಜಯ್ ಪಾಟೀಲ್, ರಾಜು ಜಾಧವ್, ಚಂದ್ರಕಾಂತ್ ಭೋಸಲೆ, ದೀಪಾಲಿ ಘೋರ್ಪಡೆ, ವಿಶಾಲ್ ದೇವಕುಳೆ, ಸಾಗರ್ ಪಾಟೀಲ್, ವಿಕಾಸ್ ಪಾಟೀಲ್, ಸತೀಶ್ ಪಾಣಾರಿ ಹಾಗೂ ಸರ್ದಾರ್ ಟಿಪ್ಪೆ ಸೇರಿದಂತೆ ಹಲವು ಶಿವಸೇನಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಪ್ರಸ್ತುತ ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Tags:

error: Content is protected !!