Chikkodi

ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 30 ಕ್ವಿಂಟಲ್‌ ಪಡಿತರ ಅಕ್ಕಿ ವಶ

Share

ಕರ್ನಾಟಕ ಸರ್ಕಾರವು ಬಡವರಿಗಾಗಿ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ, 30 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಬೋರಗಾಂವ ಪಟ್ಟಣದ ಮಾರ್ಗವಾಗಿ ಮಹಾರಾಷ್ಟ್ರದ ಇಚಲಕರಂಜಿಗೆ ಟೆಂಪೋದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಶಮನವಾಡಿಯ ವಿನಾಯಕ ಕಮತೆ ಅವರಿಗೆ ಸೇರಿದ ಸುಮಾರು ₹66,000 ಮೌಲ್ಯದ 30 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿ ಅಭಿಜಿತ ಗಾಯಕವಾಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಈ ಅಕ್ರಮ ಸಾಗಣೆ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಸದಲಗಾ, ಮಂಗೂರ ಹಾಗೂ ಬೋರಗಾಂವ ಪ್ರದೇಶಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ನಿರಂತರ ದಾಳಿಗಳನ್ನು ನಡೆಸುತ್ತಿದ್ದು, ಅಕ್ರಮ ಸಾಗಣೆದಾರರಲ್ಲಿ ನಡುಕ ಹುಟ್ಟಿಸಿದ್ದಾರೆ.

ಸ್ಥಳೀಯವಾಗಿ ಸಾರ್ವಜನಿಕರಿಂದ ಹಾಗೂ ಕಿರಾಣಿ ಅಂಗಡಿಗಳಿಂದ ಕೆ.ಜಿ.ಗೆ ₹22 ರಂತೆ ಪಡಿತರ ಅಕ್ಕಿ ಖರೀದಿಸುವ ಕಾಳಸಂತೆಕೋರರು ಮತ್ತು ಏಜೆಂಟರು, ಅದನ್ನು ಮಹಾರಾಷ್ಟ್ರದಲ್ಲಿ ₹35 ರಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.

ಈ ದಾಳಿಯ ಸಮಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಾದ ಆಕಾಶ್ ಫುಗರೆ ಹಾಗೂ ವೆಂಕಟೇಶ್ ಮಾನೆ ಉಪಸ್ಥಿತರಿದ್ದರು.

Tags:

error: Content is protected !!