State

ಉತ್ತರಾಖಂಡ್ ಹೆಲಿಕಾಪ್ಟರ್ ದುರಂತ: ಬೆಳಗಾವಿ ಜಿಲ್ಲೆಯ ಸಿಸಿಬಿ ಇನ್‌ಸ್ಪೆಕ್ಟರ್ ಅರುಣ ಸಾಳುಂಕೆ ಸೇರಿ ಐವರು ದುರ್ಮರಣ!

Share

ಉತ್ತರಾಖಂಡ್ ಹೆಲಿಕಾಪ್ಟರ್ ಕ್ರ್ಯಾಶ್‌ಗೆ ಬೆಳಗಾವಿ ಕಂಬನಿ
ಬದರಿನಾಥ ಧಾಮದಿಂದ ಮರಳುವಾಗ ಹೆಲಿಕಾಪ್ಟರ್ ಪತನ
ಅಥಣಿ ತಾಲೂಕಿನ ಅರಟಾಳದ ಸಾಳುಂಕೆ ದುರ್ಮರಣ!!!!
ಬೆಂಗಳೂರಿನಿಂದ ಹೊರಟ ಐವರು ಭಕ್ತರ ದುರಂತಾಂತ್ಯ!

 

ಉತ್ತರಾಖಂಡ್‌ನ ಜೋಶಿಮಠ ಬಳಿ ನಡೆದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಹೆಮ್ಮೆಯ ಮಗ, ಬೆಂಗಳೂರು ಸಿಸಿಬಿಯ ದಕ್ಷ ಇನ್‌ಸ್ಪೆಕ್ಟರ್ ಅರುಣ ಸಾಳುಂಕೆ ದುರ್ಮರಣಕ್ಕೀಡಾಗಿದ್ದಾರೆ. ಬದರಿನಾಥ ದರ್ಶನ ಮುಗಿಸಿ ಡೆಹ್ರಾಡೂನ್‌ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬೆಳಗಾವಿಗರಲ್ಲಿ ತೀವ್ರ ಶೋಕ ಆವರಿಸಿದೆ.

ಉತ್ತರಾಖಂಡ್‌ನ ಜೋಶಿಮಠ ಪ್ರದೇಶದಲ್ಲಿರುವ ಮಾರ್ವಾರಿ ಸೇತುವೆಯ ಮೇಲ್ಭಾಗದಲ್ಲಿ, ಜೆಪಿ ಪವರ್ ಹೌಸ್ ಬಳಿಯ ಗುಡ್ಡದ ಬದಿಗೆ ‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಗೆ ಸೇರಿದ ಖಾಸಗಿ ಹೆಲಿಕಾಪ್ಟರ್ ಅಪ್ಪಳಿಸಿ ಪತನಗೊಂಡಿದೆ. ಬದರಿನಾಥ ಧಾಮದಿಂದ ಡೆಹ್ರಾಡೂನ್‌ಗೆ ಮರಳುತ್ತಿದ್ದ ಈ ಹೆಲಿಕಾಪ್ಟರ್‌ನಲ್ಲಿದ್ದ ಒಬ್ಬ ಪೈಲಟ್ ಹಾಗೂ ಬೆಂಗಳೂರು ಮೂಲದ ಐವರು ಯಾತ್ರಿಕರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಬೆಂಗಳೂರು ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರುಣ ಸಾಳುಂಕೆ, ಪ್ರತಾಪ್, ಶಂಕರ್ ಗೌಡ, ಸುಧೀರ್ ಕೆ. ಹಾಗೂ ಹೆಚ್.ಎಸ್. ನಟರಾಜ್ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸ್, ಎಸ್‌ಡಿಆರ್‌ಎಫ್ (SDRF), ಭಾರತೀಯ ಸೇನೆ ಹಾಗೂ ಐಟಿಬಿಪಿ (ITBP) ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಮೃತದೇಹಗಳ ತೆರವು ಕಾರ್ಯ ತೀವ್ರಗೊಳಿಸಿದ್ದಾರೆ. ಮಾರ್ಗಮಧ್ಯೆ ಜೋಶಿಮಠ ಬಳಿ ಹೆಲಿಕಾಪ್ಟರ್ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿತಗೊಂಡು ಕಣ್ಮರೆಯಾಗಿತ್ತು ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಕುಮಾರ್ ಹಾಗೂ ಯುಸಿಎಡಿಎ (UCADA) ಸಿಇಒ ಪ್ರತೀಕ್ ಜೈನ್ ತಿಳಿಸಿದ್ದಾರೆ.

ಈ ದುರಂತದಲ್ಲಿ ಇಡೀ ಬೆಳಗಾವಿ ಜಿಲ್ಲೆ ಹಾಗೂ ಪೊಲೀಸ್ ಇಲಾಖೆ ಆಘಾತಕ್ಕೊಳಗಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದ ನಿವಾಸಿಯಾಗಿದ್ದ ಅರುಣ ಸಾಳುಂಕೆ ಅವರು 2007ರ ಬ್ಯಾಚ್‌ನ ದಕ್ಷ ಅಧಿಕಾರಿಯಾಗಿದ್ದರು. ಸೇವೆಯ ಆರಂಭದಲ್ಲಿ ದೆಹಲಿಯ ಇಂಟಲಿಜೆನ್ಸ್ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಇವರು, ಬಳಿಕ ರಾಜ್ಯಕ್ಕೆ ಆಗಮಿಸಿ ಬೆಂಗಳೂರಿನ ನೆಲಮಂಗಲ, ಕುಣಿಗಲ್, ಬಾಣಸವಾಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಸಿಸಿಬಿಯಲ್ಲಿ (CCB) ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಅರುಣ ಸಾಳುಂಕೆ ಅವರ ತಂದೆ ಮತ್ತು ಸಹೋದರ ಅರಟಾಳ ಗ್ರಾಮದಲ್ಲಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಅರಟಾಳ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ತಮ್ಮ ಕರ್ತವ್ಯನಿಷ್ಠೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಜನಪ್ರಿಯ ಅಧಿಕಾರಿಯನ್ನು ಕಳೆದುಕೊಂಡು ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕ ಪೊಲೀಸ್ ಪಡೆ ಕಂಬನಿ ಮಿಡಿಯುತ್ತಿದೆ.

Tags:

error: Content is protected !!