Belagavi

ಬೆಳಗಾವಿ ಕಾರಂಜಿಮಠದ ೨೭ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನ. ೨ರಿಂದ ೭ರವರೆಗೆ ಪ್ರವಚನ ಮಾಲಿಕೆ

Share

ನಗರದ ಶಿವಬಸವನಗರದಲ್ಲಿರುವ ಶ್ರೀ ಕಾರಂಜಿಮಠದ ೨೭ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ ೨ ರಿಂದ ೭ರವರೆಗೆ ಪ್ರವಚನ ಮಾಲಿಕೆ ಹಾಗೂ ನವೆಂಬರ್ ೭ರಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಕಾರಂಜಿಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಶ್ರೀಮನ್ನಿರಂಜನ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ನಾಗನೂರಿನ ರುದ್ರಾಕ್ಷಿಮಠದ ಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹುಬ್ಬಳ್ಳಿ-ವಿಜಯಪುರದ ಶ್ರೀ ಶಾಂತಾಶ್ರಮದ ಶ್ರೀ ಷೋ.ಬ್ರ. ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದು, ‘ಶ್ರೀ ನಿಜಗುಣ ಶಿವಯೋಗಿಗಳು’ ವಿಷಯದೊಂದಿಗೆ ನವೆಂಬರ್ ೨ರಂದು ಸೋಮವಾರ ಸಂಜೆ ೬ರಿಂದ ೭.೩೦ರವರೆಗೆ ಪ್ರವಚನ ಮಾಲಿಕೆಗೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಉಖಾನಾಪುರದ ಶ್ರೀ ಮರುಳಸಿದ್ಧೇಶ್ವರ ಬೃಹನ್ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಠ್ಯಬ್ದಿ ಗೌರವ ಕಾರ್ಯಕ್ರಮ ನಡೆಯಲಿದೆ. ಕಾರಂಜಿಮಠದ ಪೂಜ್ಯ ಡಾ. ಶಿವಯೋಗಿ ದೇವರು ಸಮ್ಮುಖ ವಹಿಸಲಿದ್ದು, ಕೆಎಲ್ಇ ಸಂಸ್ಥೆಯ ಪೂರ್ವ ಕಾರ್ಯದರ್ಶಿ ಡಾ. ಎಫ್.ವಿ. ಮಾನ್ವಿ ಅವರನ್ನು ಗೌರವಿಸಲಾಗುವುದು.

ನವೆಂಬರ್ ೩ರಂದು ಉಪ್ಪಿನ ಬೆಟಗೇರಿಯ ಜಗದ್ಗುರು ಮೂರುಸಾವಿರ ಶಾಖಾಮಠದ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ‘ಶ್ರೀ ಮೈಲಾರ ಬಸವಲಿಂಗ ಶರಣರು ’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ.

ನವೆಂಬರ್ ೪ರಂದು ಘೋಡಗೇರಿಯ ಶ್ರೀ ಶಿವಾನಂದಮಠದ ಶ್ರೀ ಷೋ.ಬ್ರ. ಮಲ್ಲಯ್ಯ ಮಹಾಸ್ವಾಮಿಗಳು ‘ ಶ್ರೀ ಸರ್ಪಭೂಷಣ ಶಿವಯೋಗಿಗಳು’ ವಿಷಯವನ್ನು ನಿರೂಪಿಸಲಿದ್ದಾರೆ.

ನವೆಂಬರ್ ೫ರಂದು ಬಸವಬೆಳವಿಯ ಶ್ರೀ ಚರಂತೇಶ್ವರಮಠದ ಪೂಜ್ಯ ಶ್ರೀ ಶರಣಬಸವ ದೇವರು ‘ ಶ್ರೀ ಘನಮಠ ಶಿವಯೋಗಿಗಳು ’ ಕುರಿತು ಪ್ರವಚನ ನೀಡಲಿದ್ದಾರೆ.

ನವೆಂಬರ್ ೬ರಂದು ಶೇಗುಣಸಿಯ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಡಾ. ಮಹಾಂತಪ್ರಭು ಮಹಾಸ್ವಾಮಿಗಳು ‘ ಶ್ರೀ ಕಡಕೋಳ ಮಡಿವಾಳ ಶಿವಯೋಗಿಗಳು’ ವಿಷಯದ ಕುರಿತು ಪ್ರವಚನ ನಡೆಸಿಕೊಡಲಿದ್ದಾರೆ.
ನವೆಂಬರ್ ೭ರಂದು ಶನಿವಾರ ಸಂಜೆ ೬ ಗಂಟೆಗೆ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಗದಗ-ಡಂಬಳದ ಜಗದ್ಗುರು ಶ್ರೀ ತೋಂಟದಾರ್ಯ ಸಂಸ್ಥಾನಮಠದ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶೇಗುಣಸಿಯ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಡಾ. ಮಹಾಂತಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ನಂದಗಡದ ಶ್ರೀ ವಿರಕ್ತಮಠದ ಶ್ರೀ ಚನ್ನವೀರ ದೇವರು ಸಮ್ಮುಖ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಸನ್ಮಾನ್ಯ ಶ್ರೀ ಮಹಾಂತೇಶ ಕವಟಗಿಮಠ ಹಾಗೂ ಅಶೋಕ್ ಐರನ್ ಗ್ರೂಪ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸನ್ಮಾನ್ಯ ಶ್ರೀ ಜಯಂತ ಅಶೋಕ ಹುಂಬರವಾಡಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.

ಪ್ರತಿದಿನ ಕಾರ್ಯಕ್ರಮದ ಆರಂಭದಲ್ಲಿ ಕಾರಂಜಿಮಠದ ಶ್ರೀ ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ನಡೆಯಲಿದೆ.

ಪ್ರವಚನ ಮಾಲಿಕೆ ಹಾಗೂ ವಾರ್ಷಿಕೋತ್ಸವದ ಎಲ್ಲ ಕಾರ್ಯಕ್ರಮಗಳು ಶಿವಬಸವನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಜರುಗಲಿದ್ದು, ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಕಾರಂಜಿಮಠದ ವತಿಯಿಂದ ಕೋರಲಾಗಿದೆ.

Tags:

error: Content is protected !!