ಧಮ್ಮಚಕ್ರ ಮಹಾಪರಿವರ್ತನ ದಿನದ ಸ್ಮರಣಾರ್ಥ ಬೆಳಗಾವಿಯಲ್ಲಿ ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ವತಿಯಿಂದ ಬೃಹತ್ ರ್ಯಾಲಿ ಹಾಗೂ ‘ಪ್ರಬುದ್ಧ ಭಾರತ-ಸಂಕಲ್ಪ ಸಮಾವೇಶ’ ಅತ್ಯಂತ ವಿಜೃಂಭಣೆಯಿಂದ ಜರುಗಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ಆರಂಭಗೊಂಡ ಭವ್ಯ ರ್ಯಾಲಿಯು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಕನ್ನಡ ಭವನ ತಲುಪಿತು.

1956ರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಬೆಂಬಲಿಗರೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಐತಿಹಾಸಿಕ ಘಟನೆಗೆ 70 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗಾವಿ ನಗರದ ಡಾ. ಅಂಬೇಡ್ಕರ್ ಉದ್ಯಾನದಿಂದ ಚಾಲನೆ ಪಡೆದ ಬೃಹತ್ ರ್ಯಾಲಿಯು ರಾಣಿ ಚೆನ್ನಮ್ಮ ವೃತ್ತ, ಸಿವಿಲ್ ಆಸ್ಪತ್ರೆ ರಸ್ತೆ ಹಾಗೂ ರಾಮದೇವ್ ಮಾರ್ಗವಾಗಿ ಸಂಚರಿಸಿ ನೆಹರೂ ನಗರದ ಕನ್ನಡ ಭವನ ತಲುಪಿ ಸಮಾರೋಪಗೊಂಡಿತು. ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ದಲಿತ ಪರ ಹೋರಾಟಗಾರರು ಮತ್ತು ಸಾರ್ವಜನಿಕರು ರ್ಯಾಲಿಯುದ್ದಕ್ಕೂ ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಗಾವಿಯ ಕನ್ನಡ ಭವನದಲ್ಲಿ ಜರುಗಿದ ‘ಪ್ರಬುದ್ಧ ಭಾರತ-ಸಂಕಲ್ಪ ಸಮಾವೇಶ’ದಲ್ಲಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗದ ರಾಜ್ಯ ಸಂಚಾಲಕ ಬಿ.ಎನ್. ವೆಂಕಟೇಶ್ ಹಾಗೂ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ್ ಸಿದ್ದಿ ಅವರ ನೇತೃತ್ವ ವಹಿಸಿದ್ದರು. ಜಿಲ್ಲಾ ಸಂಚಾಲಕ ದುರಗಪ್ಪ ಮೇಲಿನಮನಿ, ಮಹಿಳಾ ಜಿಲ್ಲಾ ಸಂಚಾಲಕಿ ಮಂಜುಳಾ ಕಾಂಬಳೆ, ಜಿಲ್ಲಾ ಉಸ್ತುವಾರಿ ಕೆಂಪಣ್ಣ ಶಿರಟ್ಟಿ ಹಾಗೂ ವಿವಿಧ ಸಂಘಟನಾ ಸಂಚಾಲಕರಾದ ಬಸವರಾಜ ತಳವಾರ, ದುರ್ಗಾರಾಮ ಕಾಂಬಳೆ, ಶಿವರಾಮು ಕ. ತಳವಾರ, ವಿಜಯ್ ಧರಮಟ್ಟಿ, ರಮೇಶ ಮೂಕನ್ನವರ, ಎಲ್ಲಪ್ಪ ರೋಗಿ ಮತ್ತು ಬಾಲಕೃಷ್ಣ ಕೊಳ್ಯಾನಟ್ಟಿ ಸಕ್ರಿಯವಾಗಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಿದರು.

ಸಮಾವೇಶದ ಕುರಿತು ಮಾಹಿತಿ ನೀಡಿದ ರಾಜ್ಯ ಸಂಘಟನಾ ಸಂಚಾಲಕ ಸಂಜೀವ್ ಕಾಂಬಳೆ, ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಸಮಾವೇಶದ ಅಂಗವಾಗಿ ಸಂಜೆ ‘ನನ್ನ ಅಂಬೇಡ್ಕರ್’ ಎಂಬ ಮಹತ್ವಪೂರ್ಣ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಬುದ್ಧ ಭಾರತದ ಕನಸನ್ನು ಸಾಕಾರಗೊಳಿಸಲು ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈ ವೇಳೆ ಮುಖಂಡರು ಕರೆ ನೀಡಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರರ ಅನುಯಾಯಿಗಳು ಭಾಗಿಯಾಗಿದ್ಧರು.
