ಬೆಳಗಾವಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಹಾಗೂ ಪ್ರಾಣಾಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಹಿರಿಯ ಅಧಿಕಾರಿಗಳು ನಗರದ ವಿವಿಧೆಡೆ ಮಾಂಜಾ ದಾರ ಮಾರಾಟ ಮಾಡುವ ಅಂಗಡಿಗಳು ಹಾಗೂ ಪತಂಗ ಹಾರಿಸುವ ಪ್ರದೇಶಗಳ ಮೇಲೆ ದಿಢೀರ್ ದಾಳಿ ನಡೆಸಿ, ನಿಷೇಧಿತ ಮಾರಕ ದಾರವನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದಲ್ಲಿ ಚೈನೀಸ್ ಮತ್ತು ಮಂಜಾ ನೈಲಾನ್ ದಾರಗಳ ಮಾರಾಟವನ್ನು ತಡೆಯಲು ಪೊಲೀಸ್ ಆಯುಕ್ತರ ಆದೇಶದಂತೆ ಅಧಿಕಾರಿಗಳ ತಂಡವು ತೀವ್ರ ಕಾರ್ಯಾಚರಣೆ ನಡೆಸಿದೆ. ಮಾಂಜಾ ದಾರದಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಕ್ಷಿಗಳಿಗೆ ಆಗುವ ಗಂಭೀರ ಅಪಾಯಗಳನ್ನು ತಡೆಯುವ ಉದ್ದೇಶದಿಂದ ಈ ದಾಳಿಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ವಲಯದಲ್ಲಿ ಯಾರಾದರೂ ಇಂತಹ ಮಾರಕ ಮಾಂಜಾ ದಾರಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
