ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಭಗವಾನ್ ಮಹಾವೀರ ಜೈನ ಮಂದಿರದಲ್ಲಿ ಪವಿತ್ರ ನವರಾತ್ರಿ ದಸರಾ ಉತ್ಸವದ ನಿಮಿತ್ತ ಶ್ರೀ ಪದ್ಮಾವತಿ ದೇವಿಯ ಒಂಬತ್ತು ದಿನಗಳ ವಿವಿಧ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿದವು.
ನಿರಂತರ ಒಂಬತ್ತು ದಿನಗಳ ಕಾಲ ಮಂದಿರದಲ್ಲಿ ಶ್ರೀ ಪದ್ಮಾವತಿ ದೇವಿಗೆ ಬಿಳಿ, ಹಳದಿ, ಕೆಂಪು ಹಾಗೂ ಗುಲಾಬಿ ಬಣ್ಣದ ಹೂವುಗಳು ಮತ್ತು ನಿಂಬೆಹಣ್ಣುಗಳಿಂದ ವಿಶೇಷ ಮಾಲೆಗಳನ್ನು ತಯಾರಿಸಿ ಅಲಂಕರಿಸಲಾಯಿತು. ಕಮಲದ ಹೂವುಗಳು, ನವಿಲಿನ ಗರಿಗಳು ಹಾಗೂ ವಿವಿಧ ಬಗೆಯ ಹಣ್ಣುಗಳಿಂದ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಮೂಲಕ ನವರಾತ್ರಿ ಉತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಬಗೆಯ ಮಾಲೆಗಳನ್ನು ಅರ್ಪಿಸುವುದರ ಜೊತೆಗೆ ವೀಣೆ, ಡಮರು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಜೈನ ಮಂದಿರದ ಮುಖ್ಯಸ್ಥರಾದ ಅತಿಕ್ರಾಂತ ಪಾಟೀಲ ಹಾಗೂ ಸುನೀಲ ಪಾಟೀಲ ಗೌಡರ ಮನೆತನದ ಎಲ್ಲ ಕುಟುಂಬಸ್ಥರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಮಂದಿರದ ಅರ್ಚಕರಾದ ಸನ್ಮತಿ ಉಪಾಧ್ಯೆ ಕುಮಾರ ಅಲಗೌಡರ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಪಟ್ಟಣದ ಶ್ರಾವಕ-ಶ್ರಾವಿಕೆಯರು ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಂಡು ಶ್ರೀ ಪದ್ಮಾವತಿ ದೇವಿಯ ಕೃಪೆಗೆ ಪಾತ್ರರಾದರು. ಒಂಬತ್ತು ದಿನಗಳ ನವರಾತ್ರಿ ಉತ್ಸವವು ಭಕ್ತಿಭಾವದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.
