ಕಬ್ಬು ಬೆಳೆಗೆ ಎಂಎಸ್ಪಿ ಬೆಲೆ ಏರಿಕೆ, ರಾಜ್ಯದ ಎಥನಾಲ್ ಖರೀದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಬೆಳಗಾವಿ ಹತ್ತರಗಿಯಿಂದ ಹುಬ್ಬಳ್ಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸ ಚಲೋ
ಪಾದಯಾತ್ರೆಯ ಈಗಾಗಲೇ ಐದನೇ ದಿನ ಪೂರೈಸಿ ಇಂದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಪದಯಾತ್ರೆ ಧಾರವಾಡ ಪ್ರವೇಶ ಮಾಡುತ್ತಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಪ್ರಮುಖ ರೈತ ಮುಖಂಡರೊಂದಿಗೆ ಭಾನುವಾರ ತಡ ರಾತ್ರಿ ಸಭೆ ಮಾಡಿದ್ದು, ಸಭೆ ನಡೆದ ಬೆನ್ನಲ್ಲೇ ಇಂದು ರೈತ ಮುಖಡರು ಮುಂದಿನ ಪಾದಯಾತ್ರೆ ನಡೆ ಬಗ್ಗೆ 11ಗಂಟೆಗೆ ನಿರ್ಧಾರ ಪ್ರಕಟಿಸಲಿದ್ದಾರೆ.

ಕಳೆದ ದಿನ ಭಾನುವಾರ ರಾತ್ರಿ ತಡ ರಾತ್ರಿ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ರೈತ ಹೋರಾಟಗಾರರಾದ ಚೂನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಸೇರಿ ಹತ್ತು ಜನರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರವಾಡದ ತೆಗೂರಿನಿಂದ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಯಿತು. ಮೊದಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಿಗದಿಯಾಗಿತ್ತು. ಆದರೆ ಶಶಿಕಾಂತ ಗುರೂಜಿ ಒಪ್ಪದ ಹಿನ್ನಲೆಯಲ್ಲಿ, ಸಭೆ ಹುಬ್ಬಳ್ಳಿ ಪ್ರವಾಸಿ ಮಂದಿರಕ್ಕೆ ಶಿಫ್ಟ ಆಯಿತು. ಸಭೆಗೆ ಕಬ್ಬಿನ ರೈತ ಹೋರಾಟಗಾರರಾದ ಚೂನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಜತೆಗೆ ಇನ್ನೂ ಎಂಟು ಜನ ಪ್ರಮುಖರು ಭಾಗಿಯಾಗಿ ಕೇಂದ್ರ ಸಚಿವ ಜೋಸಿಯೊಂದಿಗೆ ಸಭೆ ಮಾಡಲಾಯಿತು. ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈಗಾಗಲೇ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚನೆ ಮಾಡಿದೆ, ತಜ್ಞರ ಸಮಿತಿ ಸಭೆ ಕೂಡಾ ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಎರಡು ದಿನದಲ್ಲಿ ಈ ಸಭೆ ನಡೆಯಲ್ಲಿದೆ. ಜತೆಗೆ ಎಂಎಸ್ಪಿ ಏರಿಕೆಗೂ ಸರ್ಕಾರ ಬದ್ಧವಾಗಿದೆ. ಎಷ್ಟು ಮಾಡಲು ಸಾಧ್ಯ ಇದೆ ಎಂಬುವುದರ ಕುರಿತು ಸಮಿತಿ ವರದಿ ನೀಡುತ್ತದೆ. ನೋಡಿಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ರೈತ ಮುಖಂಡರು ಭರವಸೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದ್ದು, ರೈತ ಮುಖಂಡರ ಅಧಿಕೃತವಾಗಿ ಯಾವುದನ್ನು ಹೇಳಿಲ್ಲ. ಸದ್ಯ ಈಗ ರೈತ ಮುಖಂಡರಾದ ಚೂನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಸೇರಿ ಹತ್ತು ಜನ ರೈತ ಮುಖಂಡರು ಧಾರವಾಡ ತೆಗೂರಿನಲ್ಲಿ 11ಗಂಟೆಗೆ ತಮ್ಮ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ.
