ಎಐಸಿಸಿ ಹಿಂದುಳಿದ ವರ್ಗಗಳ ಮಹಿಳಾ ವಿಭಾಗದ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗೋವಾ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ವೈಶಾಲಿ ಸುತಾರ್ ಅವರಿಗೆ ಬೆಳಗಾವಿಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಭವ್ಯ ಸನ್ಮಾನ ನೆರವೇರಿಸಲಾಯಿತು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಹಿಂದುಳಿದ ವರ್ಗಗಳ ಮಹಿಳಾ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗೋವಾ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ವೈಶಾಲಿ ಸುತಾರ್ ಅವರಿಗೆ ಬೆಳಗಾವಿಯ ವಿಶ್ವಕರ್ಮಾ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದ ಅಭಿವೃದ್ಧಿ ಹಾಗೂ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಕ್ಕೇರಿದ ಸಮಾಜದ ಹೆಮ್ಮೆಯ ನಾಯಕಿಯನ್ನು ಗೌರವಿಸಿ ಶುಭ ಹಾರೈಸಿದ ಸಮಾಜದ ಪ್ರಮುಖರು, ಅವರ ಈ ಸಾಧನೆಯು ಯುವ ಪೀಳಿಗೆಗೆ ಮತ್ತು ಮಹಿಳಾ ಶಕ್ತಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ವೈಶಾಲಿ ಸುತಾರ್, ತಮ್ಮ ಮೇಲೆ ನಂಬಿಕೆಯಿಟ್ಟು ಮಹತ್ವದ ಜವಾಬ್ದಾರಿ ನೀಡಿದ ಕಾಂಗ್ರೆಸ್ ವರಿಷ್ಠರಿಗೆ ಹಾಗೂ ಸದಾ ಬೆನ್ನೆಲುಬಾಗಿ ನಿಂತ ಸಮಾಜದ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.
ರಾಜಕೀಯವಾಗಿ ಮತ್ತು ಸಂಘಟನಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ತಳಮಟ್ಟದ ಬಲವರ್ಧನೆಗೆ ಶ್ರಮಿಸುತ್ತಿರುವ ವೈಶಾಲಿ ಸುತಾರ್ ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಎಐಸಿಸಿ ವರಿಷ್ಠರು ಈ ಉನ್ನತ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ. ಹಿಂದುಳಿದ ವರ್ಗಗಳ ಮಹಿಳೆಯರ ಧ್ವನಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಗೋವಾ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವನ್ನು ಕಾಂಗ್ರೆಸ್ ಹೈಕಮಾಂಡ್ ವ್ಯಕ್ತಪಡಿಸಿದೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ವೈಶಾಲಿ ಸುತಾರ್ ಅವರಿಗೆ ಸಮಾಜದ ನಾಯಕರು, ವಿವಿಧ ಸ್ತರದ ರಾಜಕೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
