ಬೆಳಗಾವಿ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ‘ದುರ್ಗಾಮಾತಾ ದೌಡ್’ ಭಾನುವಾರ ಬೆಳಗಾವಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. 8ನೇ ದಿನದ ಈ ಮೆರವಣಿಗೆಯಲ್ಲಿ ನವದುರ್ಗೆಯರ ವೈಭವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವಿಚಾರಧಾರೆಗಳು ಕಣ್ಮನ ಸೆಳೆದವು.

ಸಂಸ್ಕೃತಿ, ಭಕ್ತಿ ಮತ್ತು ಸಾಂಪ್ರದಾಯಿಕ ವೈಭವ ಸಮ್ಮಿಲಿತಗೊಂಡ ‘ದುರ್ಗಾಮಾತಾ ದೌಡ್’ ರವಿವಾರ ಶಹಾಪುರದ ನಾಥ ಪೈ ಸರ್ಕಲ್ನಲ್ಲಿರುವ ಶ್ರೀ ಅಂಬಾಬಾಯಿ ಮಂದಿರದಿಂದ ಶ್ರದ್ಧಾಭಕ್ತಿಗಳೊಂದಿಗೆ ಆರಂಭವಾಯಿತು. ಶ್ರೀ ದುರ್ಗಾಮಾತೆಗೆ ಮಹಾಮಂಗಳಾರತಿ ಸಲ್ಲಿಸಿ, ಪ್ರೇರಣಾ ಮಂತ್ರದೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ದೌಡ್ಗೆ ಅದ್ಧೂರಿ ಚಾಲನೆ ನೀಡಲಾಯಿತು. ರಸ್ತೆಯುದ್ದಕ್ಕೂ ಮಹಿಳೆಯರು ರಾತ್ರಿ ಪೂರ್ತಿ ಶ್ರಮಿಸಿ ಬಿಡಿಸಿದ ವರ್ಣರಂಜಿತ ರಂಗೋಲಿಗಳು, ಭಕ್ತರು ಚೆಲ್ಲಿದ ಪುಷ್ಪವೃಷ್ಟಿ ಹಾಗೂ ಮಂಗಳಾರತಿಯ ಹಾರೈಕೆಗಳು ನೆರೆದಿದ್ದ ನೂರಾರು ಭಕ್ತರಲ್ಲಿ ಭಕ್ತಿಪರವಶತೆಯನ್ನು ಇಮ್ಮಡಿಗೊಳಿಸಿದವು.

ಈ ದೌಡ್ ಪ್ರಮುಖವಾಗಿ ಶಹಾಪುರದ ಮಹಾತ್ಮ ಫುಲೆ ರಸ್ತೆ, ಲಕ್ಷ್ಮೀ ರೋಡ್, ಕಾರವಾರಿ ಗಲ್ಲಿ, ಗಣೇಶಪುರ ಗಲ್ಲಿ, ಬಸವೇಶ್ವರ ಸರ್ಕಲ್, ಮಾರುತಿ ಗಲ್ಲಿ, ಸಂಭಾಜಿ ರೋಡ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಶ್ರೀ ಜ್ಯೋತಿಬಾ ಅವರ ವೇಷಭೂಷಣಗಳು ಮೆರಗು ನೀಡಿದವು. ಪ್ರಮುಖವಾಗಿ ವಿಘ್ನೇಶ್ ಹಟ್ಟಿಕರ್ ಎಂಬ ಪುಟ್ಟ ಬಾಲಕ ಜ್ಯೋತಿಬಾ ರೂಪದಲ್ಲಿ ಸರ್ವರ ಗಮನ ಸೆಳೆದನು. ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳು ಮತ್ತು ಸಂಸ್ಕಾರಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.

ಅದೇ ರೀತಿ ಮೀರಾಪುರ ಗಲ್ಲಿಯಲ್ಲೂ ‘ದುರ್ಗಾ ಮಾತಾ ದೌಡ್’ ಸಂಭ್ರಮದಿಂದ ಜರುಗಿದ್ದು, ನವದುರ್ಗೆಯರ ಒಂಬತ್ತು ಸ್ವರೂಪಗಳ ವಿಶಿಷ್ಟ ಪ್ರದರ್ಶನವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಗಲ್ಲಿಯ ಯುವಕರು ರಾತ್ರಿ ಪೂರ್ತಿ ಶ್ರಮಿಸಿ ಪತಾಕೆಗಳು ಹಾಗೂ ಅಲಂಕಾರಗಳ ಮೂಲಕ ರಸ್ತೆಗಳನ್ನು ಶೃಂಗರಿಸಿದ್ದರು. ಬಳಿಕ ಖಡೆಬಾಜಾರ್, ಬಸವಾಣ ಗಲ್ಲಿ, ಸರಾಫ್ ಗಲ್ಲಿ, ಆಚಾರ್ಯ ಗಲ್ಲಿ ಹಾಗೂ ಪಿ.ಬಿ. ರೋಡ್ ಮಾರ್ಗವಾಗಿ ಸಾಗಿದ ಮೆರವಣಿಗೆಯು ಹೊಸೂರು ಬಸವಾಣ ಗಲ್ಲಿಯಲ್ಲಿ ಶ್ರದ್ಧಾಭಕ್ತಿಗಳೊಂದಿಗೆ ಸುಸಂಪನ್ನಗೊಂಡಿತು.

ನಾಳೆ ಸೋಮವಾರದಂದು ತಾಶೀಲದಾರ ಗಲ್ಲಿಯಿಂದ ಆರಂಭಗೊಳ್ಳುವ ದೌಡ್ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಪಾಟೀಲ್ ಗಲ್ಲಿಯ ಶ್ರೀ ಶನಿ ಮಂದಿರಕ್ಕೆ ತಲುಪಿ ಕೊನೆಗೊಳ್ಳಲಿದೆ.
