Chikkodi

ಯಮಗಣೀ ಗೈರಾಣಿ ಭೂಮಿ ಉಳಿಸಲು ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ ಆರಂಭ

Share

ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಭವಿಷ್ಯದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿರುವ ಗೈರಾಣಿ ಭೂಮಿಯನ್ನು ಉಳಿಸಿಕೊಳ್ಳಲು ಯಮಗಣೀ ಗ್ರಾಮದ ಗ್ರಾಮಸ್ಥರು ‘ಯಮಗಣೀ ಗೈರಾಣಿ ಭೂಮಿ ಉಳಿಸಿ ಅಭಿಯಾನ’ದಡಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿ ಎದುರು ಮಹಾಪುರುಷರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಈ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು. ಸರ್ವೇ ನಂ. 54 ರಲ್ಲಿರುವ ಒಟ್ಟು 23 ಎಕರೆ 19 ಗುಂಟೆ ಗೈರಾಣಿ ಭೂಮಿಯನ್ನು ಪುನರ್ವಸತಿಗಾಗಿ ಮೀಸಲಿಡಲಾಗಿದೆ.

ಈ ಭೂಮಿಯಲ್ಲಿ ಯಾವುದೇ ಯೋಜನೆ ಅಥವಾ ನಿರ್ಧಾರ ಕೈಗೊಳ್ಳುವ ಮೊದಲು ಕಡ್ಡಾಯವಾಗಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಸ್ಥಳೀಯರ ಅಭಿಪ್ರಾಯಕ್ಕೆ ಮಾನ್ಯತೆ ನೀಡಬೇಕು ಎಂಬುದು ಹೋರಾಟಗಾರರ ಮುಖ್ಯ ಬೇಡಿಕೆಯಾಗಿದೆ. ಈ ಜಾಗವನ್ನು ಮುಂದಿನ ದಿನಗಳಲ್ಲಿ ಕ್ರೀಡಾ ಸಂಕೀರ್ಣ, ವೈದ್ಯಕೀಯ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಹಾಗೂ ಪ್ರವಾಹ ಪೀಡಿತರ ಪುನರ್ವಸತಿಗಾಗಿ ಮಾತ್ರ ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಗೈರಾಣಿ ಭೂಮಿ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ನಿಪ್ಪಾಣಿ ನಗರಸಭೆ ಆಡಳಿತದ ಗಮನಕ್ಕೆ ತರಲಾಗಿದ್ದು, ಈ ಹಿಂದೆ ಸಭೆ ನಡೆಸಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ಅಹಿಂಸಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ.

ಗ್ರಾಪಂ ಮಾಜಿ ಅಧ್ಯಕ್ಷ ನಾಸಿರ್ಖಾನ್ ಇನಾಮ್ದಾರ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗೈರಾಣಿ ಭೂಮಿ ಅತ್ಯಗತ್ಯ ಎಂದು ತಿಳಿಸಿದರು. ಸತ್ಯಾಗ್ರಹದ ವೇಳೆ ಗ್ರಾಮಸ್ಥರು ಜಾತಿ, ಪಕ್ಷ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಲು ದೃಢಸಂಕಲ್ಪ ಮಾಡಿದರು. ಆಡಳಿತ ಯಂತ್ರವು ಸ್ಪಂದಿಸುವವರೆಗೆ ಈ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದು, ಈ ಸಂದರ್ಭದಲ್ಲಿ ಗ್ರಾಮದ ಹಂಚಿನ ಹಾಗೂ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!